ಕುಶಾಲನಗರದ ಖಾಸಗಿ ಹೋಟೆಲ್‌ನಲ್ಲಿ ಸಂಭವಾಮಿ ಯುಗೇ ಯುಗೇ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಜೈ ಶೆಟ್ಟಿ, ಮಧುರಾಗೌಡ, ನಿಶಾ ರಜಪುತ್, ಪ್ರಮೋದ್ ಶೆಟ್ಟಿ ಇತರರು ಇದ್ದರು. 
ಜಿಲ್ಲೆ

21 ರಂದು ಸಂಭವಾಮಿ ಯುಗೇ ಯುಗೇ ಚಿತ್ರ ಬಿಡುಗಡೆ

ಕುಶಾಲನಗರ : ಸಂಭವಾಮಿ ಯುಗೇ ಯುಗೇ ಚಲನಚಿತ್ರ ಜೂ.21ಕ್ಕೆ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ ತಿಳಿಸಿದರು.

ಕೃಷ್ಣ ಮತ್ತು ಅರ್ಜುನ ಕಥೆಯ ಹಂದರ ಹೊಂದಿರುವ ಚಿತ್ರ ಇದಾಗಿದ್ದು, ಕಣ್ಣು ಕಾಣದ ತಾಯಿಯೊಬ್ಬಳು ತನ್ನ ಮಕ್ಕಳ ಭವಿಷ್ಯಕ್ಕಾಗಿ ಹೆಣಗುವ ಚಿತ್ರವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚಿತ್ರದಲ್ಲಿ ಕುಶಾಲನಗರದ ಪ್ರತಿಭೆ ಮಧುರಗೌಡ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡುವ ಮೂಲಕ ಕನ್ನಡ ಚಿತ್ರರಂಗದ ಉಳಿವಿಗೆ ಸಹಕರಿಸಿ ಎಂದು ನಾಯಕ ನಟ ಜೈಶೆಟ್ಟಿ ಕೋರಿದರು.

ನಾಯಕಿ ನಟಿ ಮಧುರಾಗೌಡ ಮಾತನಾಡಿ, ಈಗಾಗಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಚಿತ್ರರಂಗ ನನಗೆ ಹೊಸದು. ಈ ಚಿತ್ರದಲ್ಲಿ ಹಿರಿಯ ನಟಿ ಸುಧಾರಾಣಿ ಮಗಳ ಪಾತ್ರದಲ್ಲಿ ನಟಿಸಿದ್ದೇನೆ. ಗ್ರಾಮೀಣ ಭಾಗದ ಮುಗ್ಧ ಹುಡುಗಿಯ ಪಾತ್ರ ನನ್ನದು ಎಂದು ಖುಷಿ ಹಂಚಿಕೊಂಡರು.

ರಾಜಲಕ್ಷ್ಮೀ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಚಿತ್ರದಲ್ಲಿ ಶೆಟ್ಟಿಗರ್ ಸಂಗೀತ ನಿರ್ದೇಶನವಿದೆ. ಪ್ರಾಂಕಿನ್ ರಾಕಿ ಹಿನ್ನೆಲೆ ಸಂಗೀತವಿದೆ. ನರಸಿಂಹ ಸಾಹಸ ನಿರ್ದೇಶನ, ಗೀತಾ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ತಾರಾಗಣದಲ್ಲಿ ಜೈಶೆಟ್ಟಿ, ಮಧುರಾಗೌಡ, ನಿಶಾ ರಜಪುತ್, ಪ್ರಮೋದ್ ಶೆಟ್ಟಿ, ಸುಧಾರಾಣಿ, ಭವ್ಯಾ, ಅಭಯ್ ಪುನಿತ್, ರಾಜೇಂದ್ರ ಕಾರಂತ್, ಬಲ ರಾಜವಾಡಿ, ವೆಂಕಟೇಶ್ ಪ್ರಸಾದ್, ಭಜರಂಗಿ ಪ್ರಸನ್ನ ನಟಿಸಿದ್ದಾರೆ ಎಂದು ಮಾಹಿತಿ ನೀಡಿದರು.