ಜಿಲ್ಲೆ

ಸಮರ್ಥ ಕನ್ನಡಿಗರ ಕೊಡಗು ಘಟಕದಿಂದ ಕನ್ನಡ ಹಬ್ಬ

reportermys

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕನ್ನಡ ನಿರ್ಲಕ್ಷ್ಯ ಮಾಡುವ ಪ್ರವೃತ್ತಿ ಬೆಳೆಯುತ್ತಿರುವ ದಿನಮಾನಗಳಲ್ಲಿ, ಮಕ್ಕಳಲ್ಲಿ ಈ ನೆಲದ ಭಾಷೆ ಬಗ್ಗೆ ಅಭಿಮಾನ ಮೂಡಿಸಿ ಓದುವ ಸಂಸ್ಕೃತಿ ಬೆಳೆಸುವ ಪ್ರಯತ್ನ ನಡೆಯಬೇಕೆಂದು ರೋಟರಿ ಜಿಲ್ಲೆಯ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಎಚ್.ಟಿ. ಅನಿಲ್ ಹೇಳಿದರು.

ಸಮರ್ಥ ಕನ್ನಡಿಗರು ಕೊಡಗು ಘಟಕದಿಂದ ಲಯನ್ಸ್ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ನಿಮ್ಮ ಪ್ರತಿಭೆ-ನಮ್ಮ ವೇದಿಕೆ-೨೦೨೨ ಕನ್ನಡ ಹಬ್ಬದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಜಿಲ್ಲೆಯಲ್ಲಿ ಯೋಗ್ಯ ವಾದ ಪುಸ್ತಕ ಮಳಿಗೆಯ ಅತ್ಯಗತ್ಯ ಇದೆ. ಪುಸ್ತಕ ಸಂಸ್ಕತಿ ಯೊಂದಿಗೆ ಭಾಷೆ ಬೆಳೆಸುವ ಅನಿವಾರ್ಯತೆ ಇದೆ ಎಂದರು.

ಪುಸ್ತಕ ಓದುವ ಅಭಿರುಚಿ ಕಡಿಮೆಯಾಗುತಿದ್ದು, ಈ ಹಿಂದೆ ಒಂದು ಮನೆ ಯಲ್ಲಿ ಎಷ್ಟು ಕನ್ನಡ ಪುಸ್ತಕ ಸಂಗ್ರಹವಿದೆ ಎನ್ನುವ ಕುತೂಹಲ ವಿತ್ತು. ಪ್ರಸ್ತುತ ಪುಸ್ತಕಗಳ ಬದಲಾಗಿ ಮೊಬೈಲ್ ಗೀಳು ಹೆಚ್ಚಾಗಿದೆ. ಮಕ್ಕಳಲ್ಲಿನ ಈ ಗೀಳಿಗೆ ನಾವೇ ಕಾರಣ. ಪಾಲಕರು ಮಕ್ಕಳಲ್ಲಿ ಓದುವ ಆಸಕ್ತಿ ಬಿತ್ತುವ ಅಗತ್ಯವಿದೆ ಎಂದು ಎಚ್.ಟಿ. ಅನಿಲ್ ಹೇಳಿದರು.

ಮಡಿಕೇರಿ ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್ ಮಾತನಾಡಿ, ಸಮರ್ಥ ಕನ್ನಡಿಗ ಸಂಸ್ಥೆ ಕನ್ನಡ ಪರ ಕಾರ್ಯಕ್ರಮ ಆಯೋಜಿಸುವ ಮೂಲಕ ಪ್ರತಿಭಾ ಪ್ರದರ್ಶನಕ್ಕೆ ಅನುವು ಮಾಡಿಕೊಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಕನ್ನಡ ನೆಲ, ಭಾಷೆ, ಸಂಸ್ಕೃತಿಯನ್ನು ಪ್ರತಿಯೊಬ್ಬರು ಪ್ರೀತಿಸಬೇಕೆಂದು ಕರೆ ನೀಡಿದರು.

ಸಮರ್ಥ ಕನ್ನಡಿಗ ಸಂಘಟನೆ ಸ್ಥಾಪಕಾಧ್ಯಕ್ಷ ಡಾ. ಲಿಂಗೇಶ್ ಹುಣಸೂರು ಮಾತನಾಡಿ, ಮಾತು ಕೆಲಸವಾಗಬಾರದು- ಕೆಲಸ ಮಾತನಾಡ ಬೇಕು ಎನ್ನುವ ನಾಣ್ನುಡಿಯಂತೆ ಕನ್ನಡ ಪರ ಕೆಲಸಗಳು ಇಂದು ಸಮಾಜದಲ್ಲಿ ಮಾತನಾಡಬೇಕಾಗಿದೆ. ಪ್ರಸ್ತುತ ವಿವಿಧ ಕನ್ನಡಪರ ಸಂಘಟನೆಗಳಿಂದ ಕಾರ್ಯಕ್ರಮ ನಡೆಯುತ್ತಿವೆಯಾದರು, ಅದು ರಾಜಕೀಯ ಪಕ್ಷಗಳ ಪ್ರಮುಖರನ್ನು ಮೆರೆಸುವ ಕಾರ್ಯಕ್ರಮ ಗಳಾಗಿವೆ ಎಂದು ವಿಷಾದ ವ್ಯಕ್ತ ಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಕ್ರಿಯವಾಗಿ ಕನ್ನಡ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದೆ. ಸದಸ್ಯತ್ವ ಅಭಿಯಾನವೂ ವೇಗ ಪಡೆದಿದೆ. ಮುಂದಿನ ದಿನಗಳಲ್ಲಿ ವಿಭಿನ್ನ ಕಾರ್ಯ ಯೋಜನೆ ರೂಪಿಸಲಾಗುವುದೆಂದರು.

ಸಮರ್ಥ ಕನ್ನಡಿಗರು ಸಂಸ್ಥೆ ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮಿ ಮಾತನಾಡಿ, ಜಿಲ್ಲೆಯ ಪ್ರತಿಭೆಗಳಿಗೆ ವೇದಿಕೆ ನೀಡುವ ನಿಟ್ಟಿನಲ್ಲಿ ಪ್ರತೀ ವರ್ಷ ಸಮರ್ಥ ಕನ್ನಡಿಗ ಸಂಸ್ಥೆಯಿಂದ ನಿಮ್ಮ ಪ್ರತಿಭೆ - ನಮ್ಮ ವೇದಿಕೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸಮರ್ಥ ಕನ್ನಡಿಗ ಸಂಸ್ಥೆ ಪ್ರಧಾನ ಸಂಚಾಲಕ ಆನಂದ ದೆಗ್ಗನಹಳ್ಳಿ, ಹಿಮವನ ಪಬ್ಲಿಕೇಷನ್ ಪ್ರಕಾಶಕ ಲಕ್ಷ್ಮಿ ಕೆ. ಲಿಂಗೇಶ್, ಮುಂಬೈನ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷೆ ಜಯಂತಿ ಸಿ.ರಾವ್ ಮತ್ತಿತರರು ಇದ್ದರು.

ಗಾಯತ್ರಿ ಚೆರಿಯಮನೆ ನಿರೂಪಿಸಿದರು. ಶ್ರೀರಕ್ಷಾ ಪ್ರಭಾಕರ್ ಪ್ರಾರ್ಥಿಸಿದರು. ಪ್ರತಿಮಾ ಹರೀಶ್ ರೈ ಸ್ವಾಗತಿಸಿದರು. ಶಾಂತ ಹೆಗಡೆ ವಂದಿಸಿದರು.