ಮಂಗಳೂರು: ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಪ್ರತಿಯೊಬ್ಬ ವೈದ್ಯರೂ ಸಾಮಾಜಿಕ ಹೊಣೆಗಾರಿಕೆ ಅರಿತು ಕರ್ತವ್ಯ ನಿರ್ವಹಿಸಿದಾಗ ಸುಂದರ ಸಮಾಜದ ನಿರ್ಮಾಣ ಸಾಧ್ಯವಿದೆ ಎಂದು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಹೇಳಿದರು.
ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಬುಧವಾರ ಬಾಯಿ ಕ್ಯಾನ್ಸರ್ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಮುರಲೀ ಮೋಹನ್ ಚೂಂತಾರು ಮತ್ತು ಡಾ.ರಾಜಶ್ರೀ ಮೋಹನ್ ಅವರು ತಮ್ಮ ದಂತ ವೈದ್ಯಕೀಯ ಸೇವೆ ಜೊತೆಗೆ ಹಲವಾರು ಸಾಮಾಜಿಕ ಬದ್ಧತೆಯ ರಕ್ತದಾನ ಶಿಬಿರ, ಉಚಿತ ರಕ್ತದೊತ್ತಡ ಶಿಬಿರ, ಮಧುಮೇಹ ತಪಾಸಣಾ ಶಿಬಿರ, ಬಾಯಿ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಸುತ್ತಾ ತನ್ನ ಸಾಮಾಜಿಕ ಕಾಳಜಿಯನ್ನು ಮೆರೆದಿದ್ದಾರೆ ಎಂದರು.
ಈ ಸಂದರ್ಭ ಎಲ್ಲ ರೋಗಿಗಳಿಗೆ ಡಾ.ಚೂಂತಾರು ಅವರು ಬರೆದ ಅರಿವು ಬಾಯಿ ಕ್ಯಾನ್ಸರ್ ಮಾರ್ಗದರ್ಶಿ ಪುಸ್ತಕವನ್ನು ಉಚಿತವಾಗಿ ಹಂಚಲಾಯಿತು. ರಾಜಕೀಯ ಮತ್ತು ಸಾಮಾಜಿಕ ಧುರೀಣ ಹರ್ಷದ್ ವರ್ಕಾಡಿ, ದಂತ ವೈದ್ಯರಾದ ಡಾ.ಮುರಲೀ ಮೋಹನ್ ಚೂಂತಾರು ಮತ್ತು ಡಾ.ರಾಜಶ್ರೀ ಮೋಹನ್, ದಂತ ಚಿಕಿತ್ಸೆ ಸಹಾಯಕಿಯರಾದ ರಮ್ಯ, ಚೈತ್ರ, ಸುಶ್ಮಿತಾ, ಜಯಶ್ರೀ ಮೊದಲಾದವರು ಉಪಸ್ಥಿತರಿದ್ದರು. ಸುಮಾರು 50 ಮಂದಿ ರೋಗಿಗಳು ಈ ಶಿಬಿರದ ಪ್ರಯೋಜನ ಪಡೆದರು.