ವಿಜಯವಾಣಿ ಸುದ್ದಿಜಾಲ ಉಡುಪಿ
ಅತ್ಯಂತ ಕಷ್ಟದ ಹಾಗೂ ಬಡತನದಲ್ಲೇ ಬೆಳೆದ ನಾಡೋಜ ಡಾ. ಜಿ.ಶಂಕರ್ ಅವರಿಗೆ ಇನ್ನೊಬ್ಬರ ಕಷ್ಟದ ಅರಿವಿದೆ. ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಅನ್ಯರಿಗಾಗಿ ಯಾರು ಜೀವಿಸುತ್ತಾರೋ ಅದು ನಿಜವಾದ ಜೀವನ. ಉಳಿದವರು ಸತ್ತಂತೆ ಎಂಬ ಮಾತಿನಂತೆ ಹಾಗೂ ಪರೋಪಕಾರಾಯ ಇದಂ ಶರೀರಂ ಎಂಬ ಧರ್ಮದ ಮಾತಿನಂತೆ ಪರರ ಸೇವೆಯನ್ನೇ ಅವರು ಜೀವನವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ ಸಂತಸ ವ್ಯಕ್ತಪಡಿಸಿದರು.
ಉಡುಪಿ ಅಂಬಲಪಾಡಿಯಲ್ಲಿರುವ ಶ್ಯಾಮಿಲಿ ಸಭಾಭವನದಲ್ಲಿ ಆಯೋಜಿಸಿದ್ದ ನಾಡೋಜ ಡಾ.ಜಿ ಶಂಕರ್ ಅವರ ಸಪ್ತತಿ (70) ಜನ್ಮದಿನದ ಸವಿನೆನಪಿಗಾಗಿ ಭಾನುವಾರ (ಅ.5) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಾಜಸೇವಾ ಹರಿಕಾರ ನುಡಿಚಿತ್ರ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಪುಸ್ತಕದ ಲೇಖಕ ಉದಯಕುಮಾರ್ ಹಟ್ಟಿಯಂಗಡಿ ಮಾತನಾಡಿ, ಜೀವನ ಸಾಧನೆ ಕುರಿತು ಪುಸ್ತಕ ಬರೆಯುವುದಾಗಿ ತಿಳಿಸಿದಾಗ ಶಂಕರರು ನೇರವಾಗಿಯೇ ಬೇಡ ಎಂದರು. ಆದರೆ, ಅವರ ಬದುಕು, ಸಮಾಜ ಸೇವೆ, ಸರಳ ಜೀವನ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಅವರೊಂದು ಇತಿಹಾಸ ಪುರುಷನಾಗಿ ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು. ಅದಕ್ಕೆ ಅವರ ಕುರಿತು ಮಾಹಿತಿ ನೀಡುವ ಸಚಿತ್ರ ಪುಸ್ತಕ ಬರೆದಿದ್ದೇನೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ನ ಶ್ಯಾಮಿಲಿ ನವೀನ್. ದ.ಕ. ಮೊಗವೀರ ಮಹಾಸಭಾದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಪ್ರೊ. ಎ.ವಿ. ನಾವುಡ, ಜಾನಪದ ಅಕಾಡೆಮಿ ಸದಸ್ಯ ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿದ್ದರು.
ಆನಂದ್ ಎಸ್.ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಂಕರ್ ಸಾಲಿಯಾನ್ ವಂದಿಸಿದರು.
ಯಕ್ಷಗಾನ ಪ್ರಿಯರೂ, ಪ್ರೋತ್ಸಾಹಕರೂ ಆದ ಜಿ.ಶಂಕರ್ ಜನ್ಮದಿನದ ನಿಮಿತ್ತ ಖ್ಯಾತ ಕಲಾವಿದರ ಒಗ್ಗೂಡುವಿಕೆಯಲ್ಲಿ ಕರ್ಣನ ಜನ್ಮ ಹಾಗೂ ಭೇದನ ಕಥಾನಕದ ಕರ್ಣ-ಕರ್ಣ ಯಕ್ಷಗಾನ ಆಯೋಜಿಸಲಾಗಿತ್ತು. ಮುಮ್ಮೇಳದಲ್ಲಿ ಕರ್ಣನ ಪಾತ್ರದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ ಹಾಗೂ ವಿದ್ಯಾಧರ ಜಲವಳ್ಳಿ, ಕುಂತಿ ಪಾತ್ರದಲ್ಲಿ ಸುಧೀರ ಉಪ್ಪೂರು ಹಾಗೂ ಶಶಿಕಾಂತ ಶೆಟ್ಟಿ ಕಾರ್ಕಳ, ಕೃಷ್ಣನಾಗಿ ತೋಟಿಮನೆ ಗಣಪತಿ ಹೆಗಡೆ, ಅಧೀರತ (ಹಾಸ್ಯ)ನಾಗಿ ಚಪ್ಪರಮನೆ ಶ್ರೀಧರ ಹೆಗಡೆ ಮನೋಜ್ಞ ಅಭಿನಯ ನೀಡಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಕೇಶವ ಹೆಗಡೆ ಕೊಳಗಿ ಹಾಗೂ ಚಂದ್ರಕಾಂತ ಮೂಡಬೆಳ್ಳೆ, ಮದ್ದಳೆ- ಪರಮೇಶ್ವರ ಭಂಡಾರಿ ಕರ್ಕಿ, ಚಂಡೆ- ಸೃಜನ್ ಹಾಲಾಡಿ ಸಹಕರಿಸಿದರು.
ಡಿವಿಜಿಯ ಅವರ ಹುಲ್ಲಾಗು ಬೆಟ್ಟದಡಿ ಎಂಬ ಕಗ್ಗದ ಕೊನೆಯ ಸಾಲಿನಲ್ಲಿರುವ ಎಲ್ಲರೊಳಗೊಂದಾಗು ಮಂಕುತಿಮ್ಮ ಎನ್ನುವುದನ್ನು ಜಿ.ಶಂಕರರು ಅಕ್ಷರಶಃ ಪಾಲಿಸುತ್ತಿದ್ದಾರೆ. ತಾನು ಸಣ್ಣವನೆಂಬ ಮಾತಿನ ಅಂತರಂಗದೊಳಗೆ ಸಂತನ ಗುಣವಿದೆ. ಅವರ ದಾನವೃತದ ಕೈಗೆ ಯಾವುದೇ ಜಾತಿ-ಮತ, ಧರ್ಮದ ಭೇದವಿಲ್ಲ. ಪವಿತ್ರ ಭಾವದ ವ್ಯಕ್ತಿತ್ವ ಅವರದು. | ಡಾ. ಗಾಯತ್ರಿ ನಾವುಡ. ಖ್ಯಾತ ಸಂಶೋಧಕಿ.