ವಿರಾಜಪೇಟೆ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಗುರಿ ಹೊಂದಿರುವುದರ ಜತೆಗೆ ತಾವು ಮಾಡುವ ಉದ್ಯೋಗದ ಬಗ್ಗೆ ಅಭಿಮಾನ ಹೊಂದಿರಬೇಕು ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ದಿವಂಗತ ಎ.ಕೆ.ಸುಬ್ಬಯ್ಯ ಮತ್ತು ಪೊನ್ನಮ್ಮ ದತ್ತಿನಿಧಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಾಲ್ಕನೇ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಅನೇಕ ವಿದ್ಯಾರ್ಥಿಗಳು ಪಾಲಕರು ಎದುರಿಸುವ ಅರ್ಥಿಕ ಸಂಕಷ್ಟ ಮತ್ತು ಅಸಾಯಕತೆಯಿಂದಾಗಿ ವಿದ್ಯಾಭ್ಯಾಸ ಮೊಟುಕುಗೊಳಿಸುತ್ತಾರೆ. ಈ ನಿಟ್ಟಿನಲ್ಲಿ ತಮ್ಮ ಪಾಲಕರ ಹೆಸರಿನಲ್ಲಿ ಕುಟುಂಬ ವರ್ಗದ ಸಹಕಾರದಿಂದ ದತ್ತಿ ನಿಧಿ ಸ್ಥಾಪಿಸಿ ಬಡ ವಿದ್ಯಾರ್ಥಿಗಳು ಮತ್ತು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ಗುರುತಿಸಿ ಪದವಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ.
ಪದವಿ ಪೂರೈಸಿದ ವಿದ್ಯಾರ್ಥಿಗಳು ಕೇವಲ ಉದ್ಯೋಗಕ್ಕೆ ಮಾತ್ರ ಒತ್ತು ನೀಡದೆ ಸಾಮಾಜಿಕ, ಮಾನವೀಯ ನೆಲೆಗಟ್ಟಿನಲ್ಲೂ ಕೆಲಸ ನಿರ್ವಹಿಸಬೇಕು ಎಂದರು.
ಹಿರಿಯ ಪತ್ರಕರ್ತ ಚಿದ್ವಿಲಾಸ್ ಮಾತನಾಡಿ, ವಿದ್ಯಾದಾನಂ ಮಹಾದಾನಂ ಎಂಬ ನಾಲ್ನುಡಿಯಂತೆ ಶಾಸಕರು ಸೇರಿದಂತೆ ಕುಟುಂಬ ವರ್ಗಗಳ ಅಭಿಲಾಶೆಯಂತೆ ಪಾಲಕರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿರುವುದು ಶ್ಲಾಘನೀಯ. ರಾಜಕೀಯದ ಕೆಲವು ವ್ಯಕ್ತಿಗಳು ಗಳಿಕೆಯನ್ನು ಮಾಡಿ ವೈಯಕ್ತಿಯ ವಿಚಾರಗಳಿಗೆ ಮಾತ್ರ ವಿನಿಯೋಗ ಮಾಡುತ್ತಾರೆ. ಇಂತಹದರಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ವಿಶೇಷ ರೀತಿಯಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ ಎಂದರು.
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ನರೇನ್ ಕಾರ್ಯಪ್ಪ, ಗಂಗಮ್ಮ ಸುಬ್ರಮಣಿ, ಚಂದಲೇ ಕಾರ್ಯಪ್ಪ ಇದ್ದರು.