ಶಿಕಾರಿಪುರದ ದಾಸಕೇರಿಯಲ್ಲಿರುವ ನಾಗರಕಟ್ಟೆಗೆ ಕಲ್ಲಿನ ನಾಗದೇವರಿಗೆ ಹಾಲೆರೆದು ಪೂಜಿಸಿದ ಮಹಿಳೆಯರು. 
ಜಿಲ್ಲೆ

ಹಾಲೆರೆದು ಹಾಲುಂಡ ತವರಿಗೆ ನಮನ

ಶಿಕಾರಿಪುರ: ನಾಗರಪಂಚಮಿಯ ಮುನ್ನ ದಿನವಾದ ಭಾನುವಾರ ತಾಲೂಕಿನಾದ್ಯಂತ ಮಹಿಳೆಯರು ನಾಗಚತುರ್ಥಿಯನ್ನು ಕಲ್ಲಿನ ನಾಗಪ್ಪನಿಗೆ ಹಾಲೆರೆದು ಪೂಜಿಸಿ ಸಂಭ್ರಮಿಸಿದರು. ಭಾನುವಾರ ಕಲ್ಲಿನ ನಾಗಪ್ಪನಿಗೆ ಹಾಲೆರೆದವರು ಸೋಮವಾರ ಹುತ್ತದ ನಾಗಪ್ಪನಿಗೆ ಹಾಲೆರೆಯುವುದು ವಾಡಿಕೆ.
ಹೆಣ್ಣುಮಕ್ಕಳ ಹಬ್ಬ ಎಂದೇ ನಾಗರಪಂಚಮಿಗೆ ಕರೆಯಲಾಗುತ್ತದೆ. ಹೊಸದಾಗಿ ಮದುವೆಯಾದವರು ತವರೂರಿನಲ್ಲಿ ಹೆತ್ತವರೊಡಗೂಡಿ ಹಾಲೆರೆದು ಹಾಲುಂಡ ತವರಿಗೆ ಒಳಿತಾಗಲಿ ಎಂದು ಬೇಡಿಕೊಳ್ಳುತ್ತಾರೆ. ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿದ್ದರೂ ತವರಿಗೆ ಒಳಿತಾಗಲಿ ಎಂದು ಹಾಲೆರೆಯುತ್ತಾರೆ. ತವರು ಮನೆಯಿಂದ ತಮ್ಮ ಸಹೋದರಿಯರಿಗೆ ಶುಭದ ಸಂಕೇತವಾಗಿ ಹೊಸ ಸೀರೆ, ಕಾಯಿ, ಕುಪ್ಪಸ, ಉಂಡೆಗಳನ್ನು ಒಯ್ದು ಕೊಡುತ್ತಾರೆ. ಇದು ವಾತ್ಸಲ್ಯದ ಸಂಕೇತವಾದ ಹಬ್ಬ. ಪಟ್ಟಣಗಳಿಗಿಂತ ಹಳ್ಳಿಗಳಲ್ಲಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.
ನಾಗರಪಂಚಮಿಯನ್ನು ಅಕ್ಷರಶಃ ಜೋಕಾಲಿ ಹಬ್ಬವೆಂದೂ ಕರೆಯುತ್ತಿದ್ದರು. ಪ್ರತಿ ಮನೆಗಳಲ್ಲದೆ ಊರ ಮುಂದಿನ ಅರಳಿ ಮುಂತಾದ ಬೃಹತ್ ವೃಕ್ಷಗಳಿಗೆ ದೊಡ್ಡದಾದ ಜೋಕಾಲಿ ಕಟ್ಟಲಾಗುತ್ತಿತ್ತು. ಮಕ್ಕಳು ಮತ್ತು ಹೆಂಗಳೆಯರಲ್ಲದೆ ವಿಶೇಷವಾಗಿ ಕನ್ಯೆಯರಿಗೆ ವರ್ಷಕ್ಕೊಮ್ಮೆ ಸಿಗುವ ಅಪರೂಪದ ಕ್ರೀಡೆ. ಸದಾ ಮನೆಗೆಲಸಗಳಲ್ಲಿಯೇ ತೊಡಗಿರುತ್ತಿದ್ದ ಹೆಣ್ಣುಮಕ್ಕಳಿಗೆ ಜೋಕಾಲಿ ಆಡುವುದೆಂದರೆ ಎಲ್ಲಿಲ್ಲದ ಖುಷಿಯಾಗಿತ್ತು. ಗೆಳತಿಯರೊಡಗೂಡಿ ಹುಡುಗಿಯರಂತೂ ಹುಚ್ಚೆದ್ದು ಜೋಕಾಲಿ ಆಟವಾಡುತ್ತಿದ್ದರು. ಆದರೆ ಈಗ ಆ ಸಂಭ್ರಮ ನಮಗೆ ಕಾಣಸಿಗುತ್ತಿಲ್ಲ. ಅಪರೂಪದ ಜೋಕಾಲಿ ಆಟ ಅಕ್ಷರಶಃ ಮರೆಯಾಗುತ್ತಿದೆ ಎನ್ನುವುದು ಬೇಸರದ ಸಂಗತಿ.
ಇದು ತರಹೇವಾರಿ ಉಂಡೆಗಳು ಮತ್ತು ವಿವಿಧ ಕಾಳುಗಳಿಂದ ತಯಾರಿಸಿದ ಖಾದ್ಯಗಳ ಹಬ್ಬ. ಶೇಂಗಾ ಉಂಡೆ, ಎಳ್ಳುಂಡೆ, ತಂಬಿಟ್ಟಿನ ಉಂಡೆ ಸೇರಿದಂತೆ ವಿವಿಧ ರೀತಿಯ ಉಂಡೆಗಳನ್ನು ತಿಂದು ಹೊಸ ಬಟ್ಟೆ ತೊಟ್ಟು ಹಿರಿಯರ ಆಶೀರ್ವಾದ ಪಡೆದು ಸ್ಥಳೀಯ ದೇವಾಲಯಗಳಿಗೆ ಗುಂಪು ಗುಂಪಾಗಿ ಹೋಗುವ ದೃಶ್ಯಗಳಂತೂ ಅಮೋಘವಾಗಿರುತ್ತಿತ್ತು. ಆಧುನಿಕತೆ ಭರದಲ್ಲಿ, ಕೆಲಸ ಕಾರ್ಯಗಳ ಒತ್ತಡದಿಂದ ಟಿವಿ, ಮೊಬೈಲುಗಳಿಂದ ಅವೆಲ್ಲವೂ ಕ್ರಮೇಣ ಕಡಿಮೆಯಾಗುತ್ತಿವೆ. ಮತ್ತೊಮ್ಮೆ ಹಳೆಯ ಹಬ್ಬದ ಸಡಗರದ ಸೊಬಗು ಮೂಡಿಬರಬೇಕಿದೆ.