ಜಿಲ್ಲೆ

ಗ್ಯಾರಂಟಿ ಯೋಜನೆಗಳ ಲೋಪ ಸರಿಪಡಿಸಿ

ಲಲಾಟಾಕ್ಷ ಎಸ್

ಅರಸೀಕೆರೆ: ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ತಾಲೂಕು ಆಡಳಿತ ಒತ್ತು ನೀಡಬೇಕು ಎಂದು ರೇಷ್ಮೆ ಇಲಾಖೆ ಜಂಟಿ ನಿರ್ದೇಶಕಿ ಹಾಗೂ ಉಸ್ತುವಾರಿ ನೋಡಲ್ ಅಧಿಕಾರಿ ಕಾತ್ಯಾಯಿನಿ ದೇವಿ ಹೇಳಿದರು.


ತಾಲೂಕು ಪಂಚಾಯಿತಿ ಆಡಳಿತಸೌಧದಲ್ಲಿ ಬುಧವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ನಾಡಿನ ಜನರ ಹಿತ ಮನಗಂಡಿರುವ ರಾಜ್ಯ ಸರ್ಕಾರ ಅನ್ನಭಾಗ್ಯ, ಯುವನಿಧಿ, ಶಕ್ತಿ, ಗೃಹಲಕ್ಷ್ಮೀ ಹಾಗೂ ಗೃಹ ಜ್ಯೋತಿ ಯೋಜನೆಗಳನ್ನು ಜಾರಿಗೊಳಿಸಿದೆ. ತಾಂತ್ರಿಕ ಕಾರಣದಿಂದಾಗಿ ಕೆಲ ಫಲಾನುಭವಿಗಳಿಗೆ ಯೋಜನೆ ಈವರೆಗೂ ತಲುಪಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಲೋಪ ಸರಿಪಡಿಸುವ ಹೊಣೆಗಾರಿಕೆ ತಾಲೂಕು ಮಟ್ಟದ ಅಧಿಕಾರಿಗಳ ಮೇಲಿದ್ದು ಯಾವ ಕಾರಣದಿಂದ ಹಿನ್ನಡೆಯಾಗಿದೆ ಎಂಬುದನ್ನು ಅರಿತು ಲೋಪ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಸಲಹೆ ನೀಡಿದರು.


ಪರಿಶಿಷ್ಟ ಜಾತಿ ಹಾಗೂ ಪಂಗಡ ಸಮುದಾಯದ ವಿದ್ಯಾರ್ಥಿಗಳ ವಸತಿನಿಲಯದಲ್ಲಿ ಗುಣಮಟ್ಟದ ಆಹಾರ ಪೂರೈಕೆ ಮಾಡುವ ಜತೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಶಿಕ್ಷಣದ ಗುಣಮಟ್ಟ ಸುಧಾರಿಸಲು ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ನೀಡುವುದು ಹಾಗೂ ಅಪೌಷ್ಟಿಕತೆ ನಿರ್ಮೂಲನೆಗೂ ಆದ್ಯತೆ ನೀಡುವ ಅಗತ್ಯವಿದೆ ಎನ್ನುವುದನ್ನು ಎಲ್ಲರೂ ಮನಗಾಣಬೇಕು. ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಸಂಬಂಧ ಯುವಕರಿಗೆ ಸೌಲಭ್ಯ ವಿತರಣೆಗೂ ಚಿಂತನೆ ನಡೆಸಲಾಗಿದೆ. ಗೃಹ ಮತ್ತು ಸಣ್ಣ ಕೈಗಾರಿಕೆಗಳನ್ನು ಗುರುತಿಸಿ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ವಿದ್ಯುತ್, ಕುಡಿಯುವ ನೀರು, ಬಿತ್ತನೆ ಬೀಜ ಸೇರಿ ಅಗತ್ಯ ಸೇವೆಗಳನ್ನು ಒದಗಿಸಲು ಅಧಿಕಾರಿ ಸಮೂಹ ಸಮರೋಪಾದಿಯಲ್ಲಿ ಶ್ರಮಿಸಬೇಕು ಎಂದರು.


ಮುದುಡಿ ಗ್ರಾಮದಲ್ಲಿರುವ ವಿದ್ಯಾರ್ಥಿಗಳ ವಸತಿನಿಲಯಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಹಾರ, ಆರೋಗ್ಯ, ಕೃಷಿ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ತಾಪಂ ಇಒ ನಾಗರಾಜ್, ಬಿಇಒ ಮೋಹನ್ ಕುಮಾರ್, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಸತೀಶ್, ಸಮಾಜ ಕಲ್ಯಾಣಾಧಿಕಾರಿ ಪರಶಿವಮೂರ್ತಿ, ಕೃಷಿ ಇಲಾಖೆ ಉಪ ನಿರ್ದೇಶಕ ಎ.ಪಿ.ಶಿವಕುಮಾರ್ ಹಾಜರಿದ್ದರು.