ಅರಕಲಗೂಡು: ರಾಜ್ಯ ಸರ್ಕಾರ ವಿದ್ಯುತ್ ಪೂರೈಕೆಯಲ್ಲಿ ಉಂಟಾಗಿರುವ ಅವ್ಯವಸ್ಥೆ ಸರಿಪಡಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಶಾಸಕ ಎ.ಮಂಜು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ಸಮಸ್ಯೆ ಬಿಗಡಾಯಿಸಿದೆ. ನಿಗದಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ತೀವ್ರ ಬರಪರಿಸ್ಥಿತಿ ಉಂಟಾಗಿದೆ. ನೀರಾವರಿ ಸೌಲಭ್ಯ ಹೊಂದಿರುವ ರೈತರು ಬೆಳೆ ರಕ್ಷಣೆ ಹಾಗೂ ಜಾನುವಾರುಗಳಿಗೆ ಮೇವು ಬೆಳೆದು ಕೊಳ್ಳಲು ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸರಬರಾಜಿಗೂ ತೊಂದರೆಯಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. 2 ಸಾವಿರ ಮೆಗಾವಾಟ್ ಕೊರತೆ ಇದ್ದು, ಹೊರ ರಾಜ್ಯಗಳಿಂದ ಖರೀದಿ ನಡೆಸುವ ಪ್ರಸ್ತಾವನೆಗೆ ಕೇವಲ 270 ಮೆಗಾವಾಟ್ ಮಾತ್ರ ಲಭ್ಯವಾಗಬಹುದು ಎಂಬ ಮಾಹಿತಿ ದೊರೆತಿದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಳ್ಳದ ಕಾರಣ ಇಂತಹ ಸ್ಥಿತಿ ಬಂದಿದೆ. ಮುಂದಿನ ಬೇಸಿಗೆಯಲ್ಲಿ ಇನ್ನೂ ಸಂಕಷ್ಟ ಎದುರಿಸಬೇಕಿದೆ. ಸರ್ಕಾರ ಕೂಡಲೇ ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜೋಳದ ಬೆಳೆಗೆ ಸೂಕ್ತ ಬೆಲೆ ದೊರಕುತ್ತಿಲ್ಲ. ಕೆಎಂಎಫ್ ಪಶು ಆಹಾರ ಘಟಕಗಳಿಗೆ ಕ್ವಿಂಟಾಲ್‌ಗೆ 2,500 ರೂ. ದರ ನೀಡಿ ಖರೀದಿಸುತ್ತಿದೆ. ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಖರೀದಿ ಕೇಂದ್ರ ತೆರೆದು ಇದೇ ದರದಲ್ಲಿ ಜೋಳ ಖರೀದಿಸುವಂತೆ ಕೆಎಂಎಫ್‌ಗೆ ಆದೇಶಿಸಬೇಕು ಎಂದು ಕೋರಿದರು.