ಜಿಲ್ಲೆ

ಹಸಿ ತ್ಯಾಜ್ಯದ ಗೊಬ್ಬರ ಮಾರಾಟ ಕುಂಠಿತ

ವಿಕ್ರಮ ನಾಡಿಗೇರ ಧಾರವಾಡ
ಮಹಾನಗರ ಪಾಲಿಕೆಯು ಸ್ವಚ್ಛ ಭಾರತ್ ಮಿಷನ್ ಸಮಗ್ರ ಘನತ್ಯಾಜ್ಯ ವಸ್ತು ನಿರ್ವಹಣೆ ಯೋಜನೆ ಅಡಿ ನಗರದಲ್ಲಿ ಕಾಂಪೋಸ್ಟ್ ಘಟಕ ಸ್ಥಾಪಿಸಿ ತ್ಯಾಜ್ಯ ನಿರ್ವಹಣೆ ಕಾರ್ಯಕ್ಕೆ 3 ವರ್ಷಗಳ ಹಿಂದೆ ಚಾಲನೆ ನೀಡಿದೆ. ಆದರೆ ಸಿದ್ಧವಾದ ಸಾವಯವ ಗೊಬ್ಬರ ಮಾರಾಟಕ್ಕೆ ನಿರೀಕ್ಷೆಗೆ ತಕ್ಕ ಬೇಡಿಕೆ ಇಲ್ಲವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಡಿ ಲಕಮನಹಳ್ಳಿಯಲ್ಲಿ (ಹೊಸಯಲ್ಲಾಪುರ) 12.63 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿರುವ 150 ಟಿಪಿಡಿ (ಟನ್ ಪರ್ ಡೇ) ಸಾಮರ್ಥ್ಯದ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಟಕದಲ್ಲಿ ಈವರೆಗೆ ಸಾಕಷ್ಟು ಪ್ರಮಾಣದಲ್ಲಿ ಗೊಬ್ಬರ ತಯಾರಿಸಲಾಗಿದೆ. ಗೊಬ್ಬರ ಪರೀಕ್ಷೆ ಸಹ ನಡೆಸಿದ್ದು, ಎನ್‌ಪಿಕೆ ಮೌಲ್ಯದಂತೆ ಗೊಬ್ಬರ ತಯಾರಾಗಿದೆ. ಇದನ್ನು ಬಳಸಬಹುದು ಎಂದು ಪ್ರಯೋಗಾಲಯ ವರದಿಯನ್ನೂ ನೀಡಿದೆ.
ಆರಂಭದ ದಿನಗಳಲ್ಲಿ ಗೊಬ್ಬರಕ್ಕೆ ಕೊಂಚ ಬೇಡಿಕೆ ಇತ್ತು. ಇದೀಗ ಖರೀದಿಗೆ ನಿರಾಸಕ್ತಿ ವಹಿಸಿರುವುದು ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ. 2021ರ ಜೂನ್‌ನಲ್ಲಿ ಏರ್ಪಡಿಸಿದ್ದ ಹರಾಜು ಪ್ರಕ್ರಿಯೆಯಲ್ಲೂ ಯಾರೂ ಬಂದಿರಲಿಲ್ಲ. 2022ರ ಡಿಸೆಂಬರ್‌ನಿಂದ ಈವರೆಗೆ ಒಂದು ಕೆಜಿ ಗೊಬ್ಬರವೂ ಮಾರಾಟವಾಗಿಲ್ಲ. ಹೀಗಾಗಿ ಗೊಬ್ಬರ ತಯಾರಿಕೆ ಯೋಜನೆ ವ್ಯರ್ಥವಾಯಿತೇ? ಎಂಬ ಪ್ರಶ್ನೆ ಉದ್ಭವಿಸಿದೆ.
ಮಹಾನಗರ ಪಾಲಿಕೆ ಪ್ರತಿ ಕೆಜಿಗೆ 10 ರೂ. ದರ ನಿಗದಿ ಮಾಡಿದೆ. ಆದರೆ ಖರೀದಿದಾರರು 2.3 ರೂ.ದಿಂದ 3 ರೂ.ಗೆ ಕೆಜಿಯಂತೆ ಕೇಳುತ್ತಿದ್ದಾರೆ. ಈ ದರ ಪಾಲಿಕೆಗೆ ಒಪ್ಪಿಗೆ ಆಗುತ್ತಿಲ್ಲ. ಹೀಗಾಗಿ ಸೂಕ್ತ ದರದಲ್ಲಿ ಸಣ್ಣ ಸಣ್ಣ ಪ್ಯಾಕೆಟ್‌ಗಳನ್ನು ಸಿದ್ಧಪಡಿಸಿ ಮಾರಾಟ ಮಾಡುವ ಚಿಂತನೆಯೂ ನಡೆದಿದೆ.
ಗೊಬ್ಬರ ತಯಾರಿಕೆ ಆರಂಭಿಸಿದ ಬಳಿಕ ಗೊಬ್ಬರ ಮಾರುವ ಸರ್ಕಾರದ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಳ್ಳುವ ಚಿಂತನೆ ನಡೆದಿತ್ತು. ಆದರೆ ಆ ಕಾರ್ಯ ಇನ್ನೂ ಸಫಲವಾಗಿಲ್ಲ. ಹೀಗಾಗಿ ತಯಾರಿಸಿದ ಗೊಬ್ಬರ ಮಾರಾಟ ಮಾಡುವುದೇ ಸವಾಲಿನ ಕೆಲಸವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇದಕ್ಕೆ ಸೂಕ್ತ ಮಾರ್ಗ ಕಂಡುಕೊಂಡು ನಿರೀಕ್ಷಿತ ಮಟ್ಟದಲ್ಲಿ ಮಾರಾಟ ಮಾಡುವಲ್ಲಿ ಸಫಲತೆ ಕಾಣುವರೇ ಎಂದು ಕಾದು ನೋಡಬೇಕಿದೆ.
---ಬಾಕ್ಸ್---
ಗೊಬ್ಬರ ತಯಾರಿಕೆ ಹೇಗೆ?
ಮನೆ ಮನೆಗಳಿಂದ ಸಂಗ್ರಹಿಸುವ ಹಸಿ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಸುಮಾರು 60 ದಿನಗಳ ಕಾಲ ಬೇಕಿದೆ. ಮನೆಗಳಿಂದ ಸಂಗ್ರಹಿಸುವ ಹಸಿ ಕಸವನ್ನು ಘಟಕದಲ್ಲಿ 28 ದಿನಗಳ ಕಾಲ ಶೇಖರಿಸಲಾಗುತ್ತದೆ. ಈ ಕಸಕ್ಕೆ ಪರ್ಯಾಯ ದಿನಗಳಲ್ಲಿ ಮೈಕ್ರೋಸ್ ಸಿಂಪಡಿಸಿ ಕೊಳೆಯುವಂತೆ ಮಾಡಲಾಗುತ್ತದೆ. ಬಳಿಕ ಯಂತ್ರಗಳಲ್ಲಿ ಹಾಕಿ ಆರ್‌ಡಿಎಫ್ (ಟಾರಿಫೈಯ್ಡ ಚಾರಕೋಲ್) ತೆಗೆದ ಬಳಿಕ ಸಾವಯವ ಗೊಬ್ಬರ ತಯಾರಿಕೆ ವಸ್ತುಗಳನ್ನು ಪಡೆಯಲಾಗುತ್ತದೆ. ಅವುಗಳಿಗೆ ಮತ್ತೆ ಮೈಕ್ರೋಸ್ ಸಿಂಪಡಿಸಿ 28 ದಿನಗಳ ಕಾಲ ಕೊಳೆಯಲು ಬಿಡಲಾಗುತ್ತದೆ. ಕೊನೆಗೆ ಬ್ಯಾಕ್ ಫಿಲ್ಟರ್ಸ್‌ ಮತ್ತು ಏರ್ ಬ್ಯಾಕ್ ಫಿಲ್ಟರ್ಸ್‌ ಮೂಲಕ ಹಾಯಿಸಿ ಸಾವಯವ ಗೊಬ್ಬರ ಪಡೆಯಲಾಗುತ್ತದೆ.
ಎಲ್ಲಿ ಎಷ್ಟು ದಾಸ್ತಾನು?: ಧಾರವಾಡ ಹೊಸಯಲ್ಲಾಪುರ ಘಟಕದಲ್ಲಿ ಸದ್ಯ 200 ಟನ್ ಗೊಬ್ಬರ ದಾಸ್ತಾನಿದ್ದು, ಹುಬ್ಬಳ್ಳಿ ಘಟಕದಲ್ಲಿ 120 ಟನ್ ದಾಸ್ತಾನಿದೆ. ಮಾರಾಟದಲ್ಲಿ ಹಿನ್ನಡೆಯಾಗಿರುವ ಕಾರಣ ಧಾರವಾಡ ಘಟಕ ಶೇ. 60ರಷ್ಟು ಹಾಗೂ ಹುಬ್ಬಳ್ಳಿ ಘಟಕ ಶೇ. 30ರಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿದೆ.

ಪ್ರಸಕ್ತ ಸಾಲಿನಲ್ಲಿ 1.50ಲಕ್ಷ ರೂ. ಮೊತ್ತದ ಗೊಬ್ಬರ ಮಾರಾಟ ಮಾಡಲಾಗಿದೆ. ನಿಗದಿಯಾದ ದರ ಹಾಗೂ ಖರೀದಿದಾರರು ಕೇಳುವ ದರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹೀಗಾಗಿ ಸಣ್ಣ ಪ್ಯಾಕೆಟ್‌ಗಳ ಮೂಲಕ ಮಾರಾಟ ಮಾಡಲು ಚಿಂತಿಸಲಾಗಿದೆ.ಮಲ್ಲಿಕಾರ್ಜುನ ಬಿ.ಎಂ, ಕಾರ್ಯನಿರ್ವಾಹಕ ಅಭಿಯಂತರ, ಘನ ತ್ಯಾಜ್ಯ ವಿಲೇವಾರಿ ವಿಭಾಗ.