ವಿಜಯವಾಣಿ ಸುದ್ದಿಜಾಲ ಗದಗ
ತೈ ಬೆಲೆ ಹೆಚ್ಚಳ ಕುರಿತು ರಾಜ್ಯ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗಳು ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಕುತಂತ್ರವಾಗಿದೆ ಎಂದು ಸರ್ಕಾರದ ಮುಖ್ಯ ಸಚೇತಕ, ವಿಪ ಸದಸ್ಯ ಸಲೀಂ ಅಹ್ಮದ ಹೇಳಿದರು.
ಅವರು ಶುಕ್ರವಾರ ಗದಗ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರದಲ್ಲಿ ಅವರದ್ದೇ ಸರ್ಕಾರ 10 ವರ್ಷ ಆಡಳಿತ ನಡೆಸಿದ್ದು, 60 ರುಪಾಯಿ ಇದ್ದ ಪೆಟ್ರೋಲ್ ಬೆಲೆಯನ್ನು 110 ಕ್ಕೆ ತಂದು ನಿಲ್ಲಿಸಿದ್ದು ಅದೇ ಬಿಜೆಪಿ ಸರ್ಕಾರ ಅಂದು ಪ್ರತಿಭಟನೆ ಮಾಡದ ಬಿಜೆಪಿಯವರು ಈಗ ನಮ್ಮ ಸರ್ಕಾರ ಹಲವಾರು ವರ್ಷಗಳ ನಂತರ ತೆರಿಗೆಯಲ್ಲಿ ಅಲ್ಪ ಪ್ರಮಾಣದ ಹೆಚ್ಚಳ ಮಾಡಿರುವುದಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ.
ಪ್ರತಿಭಟನೆ ವೇಳೆಯಲ್ಲಿ ಗ್ಯಾರಂಟಿ ಯೋಜನೆಗಾಗಿ ದರದಲ್ಲಿ ಹೆಚ್ಚಳ ಮಾಡಿದ್ದಾರೆ ಎಂದು ಹೇಳುವ ಮೂಲಕ ಬಡವರ ವಿರೋಧಿ ಎನ್ನುವುದನ್ನು ಸ್ಪಷ್ಟಪಡಿಸುವುದಲ್ಲದೇ, ಪರೋಕ್ಷವಾಗಿ ಗ್ಯಾರಂಟಿ ಯೋಜನೆಗಳು ನಿಲ್ಲಬೇಕು, ಬಡವರಿಗೆ ಸಿಗುತ್ತಿದ್ದ ಸೌಲಭ್ಯಗಳು ಸಿಗದಂತಾಗಬೇಕು ಎನ್ನುವುದು ರಾಜ್ಯ ಬಿಜೆಪಿ ನಾಯಕರ ಕುತಂತ್ರವಾಗಿದೆ.
ಲೋಕಾ ಚುನಾವಣೆಯಲ್ಲಿ ದೇಶದ ಜನರು ಬಿಜೆಪಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಆದರೂ ಅವರು ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸಿದ್ದಾರೆ. 10 ವರ್ಷ ಅಧಿಕಾರದಲ್ಲಿದ್ದು, ಅಬ್ ಕಿ ಬಾರ್ ಚಾರ್ ಸೋ ಪಾರ್ ಎನ್ನುತ್ತಿದ್ದವರಿಗೆ ಮತದಾರರ ತಕ್ಕ ಪಾಠ ಕಲಿಸಿದ್ದಾರೆ. ಇದು ದೇಶವ್ಯಾಪಿ ಬಿಜೆಪಿಗೆ ಇರುವ ವಿರೋಧಿ ಅಲೆಯನ್ನು ತೋರಿಸುತ್ತದೆ. ದೇಶದಲ್ಲಿ ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿದೆ.
ದರ್ಶನ ವಿಷಯವಾಗಿ ಸರ್ಕಾರ ಯಾವುದೇ ಒತ್ತಡ ತಂತ್ರ ಮಾಡುತ್ತಿಲ್ಲ, ಇಲಾಖೆಯವರು ತನಿಖೆ ನಡೆಸುತ್ತಿದ್ದಾರೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ರಾಜ್ಯದ 28 ಲೋಕಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಗಿರುವ ಹಿನ್ನಡೆ ಕುರಿತು ಪರಿಶೀಲನೆ ನಡೆಸಲು ಎಐಸಿಸಿ ವಿಶೇಷ ಸಮಿತಿಯನ್ನೇ ರಚಿಸಿದೆ. ಅದರ ಆಧಾರದಲ್ಲಿ ಪಕ್ಷದ ಹಿರಿಯರು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ, ಜಿಪಂ ಮಾಜಿ ಅಧ್ಯಕ್ಷ ವಾಸಪ್ಪ ಕುರುಡಗಿ, ಸುಜಾತಾ ದೊಡ್ಡಮನಿ, ಸೈಯ್ಯದ ಖಾಲಿದ ಕೊಪ್ಪಳ, ಕೆ.ಎಂ.ಸೈಯ್ಯದ ಮುಂತಾದವರು ಹಾಜರಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನ ಪರವಾಗಿ ಜಯಘೋಷ ಕೂಗುವ ಘಟನೆಗಳು ಹೆಚ್ಚಾಗಿವೆ ಎನ್ನುವ ವಿರೋಧಿ ಪಕ್ಷಗಳ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೇ ಆಗಿರಲಿ ದೇಶ ವಿರೋಧಿಯಾಗಿ ನಡೆದುಕೊಂಡರೆ ಅದು ತಪ್ಪೇ ಅದನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ, ಯಾರೇ ಆಗಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಲೀಂ ಅಹ್ಮದ ಅಭಿಪ್ರಾಯ ವ್ಯಕ್ತ ಪಡಿಸಿದರು.
ಪ್ರಧಾನಿ ಮೋದಿ ನೇತೃತ್ವದಲ್ಲಿ ರಚನೆಯಾಗಿರುವುದು ಕಿಚಡಿ ಸರ್ಕಾರವಾಗಿದ್ದು, ಈ ಸರ್ಕಾರ ಬಹಳ ದಿನಕಾಲ ಉಳಿಯುವುದಿಲ್ಲ, ಇದನ್ನು ಬರೆದಿಟ್ಟುಕೊಳ್ಳಿ, ನಾಯ್ಡು, ನಿತೀಶ ಅವರೊಟ್ಟಿಗೆ ಅಧಿಕಾರ ಮಾಡುವುದಕ್ಕೆ ಬಿಜೆಪಿಯು ಅನಿವಾರ್ಯವಾಗಿ ಒಪ್ಪಿಕೊಂಡಿದೆ ಅಷ್ಟೇ ಎಂದು ಸಲೀಂ ಅಹ್ಮದ ಲೇವಡಿ ಮಾಡಿದರು.