ಜಿಲ್ಲೆ

ಎರಡು ತಿಂಗಳಿಂದ ಆರೋಗ್ಯ ಇಲಾಖೆ ಸಿಬ್ಬಂದಿ ವೇತನ ಬಾಕಿ

ವಿಕ್ರಮ ನಾಡಿಗೇರ ಧಾರವಾಡ
ಸಾರ್ವಜನಿಕರ ಆರೈಕೆಯಲ್ಲಿ ನಿರಂತರವಾಗಿರುವ ತೊಡಗಿರುವ ಆರೋಗ್ಯ ಇಲಾಖೆ ಸಿಬ್ಬಂದಿಯೇ ಇದೀಗ ಆರ್ಥಿಕ ಹೊರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.

ತಿಂಗಳ ಅಂತ್ಯದಲ್ಲಿ ಸಿಗಬೇಕಾದ ವೇತನ ಎರಡು ತಿಂಗಳಾದರೂ ಸಿಗುತ್ತಿಲ್ಲ.
ಹೌದು! ಇದು ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಿತಿ. ಕೇವಲ ಇದು ಒಂದು ತಿಂಗಳ ಕಥೆಯಲ್ಲ. ವರ್ಷದಲ್ಲಿ ಒಂದೆರಡು ಬಾರಿ ಸಮಯಕ್ಕೆ ಸರಿಯಾಗಿ ವೇತನ ಬಿಡುಗಡೆಯಾದರೆ, ಉಳಿದ ಎಲ್ಲ ತಿಂಗಳಲ್ಲೂ ಇದೆ ಕಥೆ.

ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯನ್ನು ವಿವಿಧ ಸ್ತರಗಳ ಹೆಡ್‌ನಲ್ಲಿ ಸೇರಿಸಲಾಗಿದೆ. ಎಲ್ಲ ಹಂತದ ಸಿಬ್ಬಂದಿಗೆ ಮಾರ್ಚ್, ಏಪ್ರಿಲ್ ತಿಂಗಳ ವೇತನವೇ ಬಿಡುಗಡೆಯಾಗಿಲ್ಲ.
ಮೇ ತಿಂಗಳು ಮುಗಿಯುತ್ತ ಬಂದರೂ ಮಾರ್ಚ್, ಏಪ್ರಿಲ್ ತಿಂಗಳ ವೇತನ ಬಿಡುಗಡೆಯಾಗಿಲ್ಲ.

ಈ ಬಗ್ಗೆ ಸಿಬ್ಬಂದಿ ಕೇಳಿದರೆ, ಈಗ ಅನುದಾನ ಬಂದಿದ್ದು, ಅನುಮೋದನೆಗೆ ಕಳುಹಿಸಲಾಗಿದೆ. ಇನ್ನು ಎರಡ್ಮೂರು ದಿನಗಳಲ್ಲಿ ಬಿಡುಗಡೆ ಆಗಲಿದೆ ಎಂಬ ಸಿದ್ಧ ಉತ್ತರವೇ ಮೇಲಧಿಕಾರಿಗಳದ್ದಾಗಿದೆ ಹೊರತು, ವೇತನ ಪಾವತಿಸಲು ಕಾಳಜಿ ವಹಿಸುತ್ತಿಲ್ಲ. ಹೀಗಾಗಿ, ಸಿಬ್ಬಂದಿ ಕಷ್ಟದಲ್ಲೇ ಕಾಲ ಕಳೆಯುವಂತಾಗಿದೆ.


ಸರಿಯಾದ ಸಮಯಕ್ಕೆ ವೇತನ ದೊರೆಯದ ಕಾರಣ ಇಲಾಖೆ ಅನೇಕ ಸಿಬ್ಬಂದಿ ಸಾಲದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳ ಶಾಲೆ ಶುಲ್ಕ, ಮನೆ ಬಾಡಿಗೆ, ಅಗತ್ಯ ವಸ್ತುಗಳ ಖರೀದಿ, ಕಾರು-ಮನೆಗಳ ಇಎಂಐ ಹೀಗೆ ನಿತ್ಯವೂ ಖರ್ಚು ಇದ್ದದ್ದೇ. ಕೆಲವರು ಬಡ್ಡಿ ಮೇಲೆ ಹಣ ಪಡೆದರೆ, ಇನ್ನು ಕೆಲವರು ಬಂಗಾರ ಅಡವಿಟ್ಟು ನಿತ್ಯದ ಜೀವನ ಸಾಗಿಸುತ್ತಿದ್ದಾರೆ.

ಮೂರು ತಿಂಗಳಿಗೊಮ್ಮೆ ಇಲಾಖೆ ನೀಡುವ ವೇತನ ಬಡ್ಡಿ ನೀಡಲು ಸಹ ಸಾಕಾಗುತ್ತಿಲ್ಲ. ಹೀಗೆ, ಒಮ್ಮೆ ಸಾಲದ ಸುಳಿಯಲ್ಲಿ ಸಿಲುಕಿರುವ ಸಿಬ್ಬಂದಿ ಸಂಪೂರ್ಣ ಸಾಲ ಮುಕ್ತರಾಗಲು ಸಾಧ್ಯವಾಗುತ್ತಲೇ ಇಲ್ಲ.


ಸರಿಯಾದ ಸಮಯಕ್ಕೆ ವೇತನ ನೀಡಲು ಸಾಧ್ಯವಾಗದ ಆರೋಗ್ಯ ಇಲಾಖೆಗೆ ಆರ್ಥಿಕ ಮುಗ್ಗಟ್ಟು ಎದುರಾಗಿದೆಯೇ ಅಥವಾ ಅಧಿಕಾರಿಗಳು ಸರಿಯಾದ ವೇಳೆಗೆ ವೇತನ ಪಾವತಿ ಮಾಡಲು ನಿರ್ಲಕ್ಷೃ ವಹಿಸುತ್ತಿದ್ದಾರೆಯೇ ಎಂಬ ಸಂಶಯ ಮೂಡಿದೆ. ಮೇಲಾಧಿಕಾರಿಗಳು ಎಲ್ಲ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಂಡುಕೊಂಡು ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡುವರೇ ಎಂಬುದನ್ನು ಕಾದು ನೋಡಬೇಕಷ್ಟೇ.

ಎನ್‌ಎಚ್‌ಎಂ (ನಾಷನಲ್ ಹೆಲ್ತ್ ಮಿಷನ್) ಸಿಬ್ಬಂದಿ ವೇತನ ಮಾತ್ರ ಆಗಿಲ್ಲ. ಉಳಿದ ಎಲ್ಲ ಸಿಬ್ಬಂದಿ ವೇತನ ಆಗಿದೆ. ಎನ್‌ಎಚ್‌ಎಂ ಅನುದಾನ ಕಳೆದ ವಾರ ಬಂದಿದ್ದು, ಸಿಇಒ ಅನುಮೋದನೆ ಬಳಿಕ ಖಜಾನೆಗೆ ಕಳುಹಿಸಿ ಶೀಘ್ರದಲ್ಲೇ ವೇತನ ಪಾವತಿ ಆಗಲಿದೆ.ಡಾ. ಶಶಿ ಪಾಟೀಲ ಜಿಲ್ಲಾ ಆರೋಗ್ಯಾಧಿಕಾರಿ