ಚಿತ್ರದುರ್ಗ: ವೇತನ ಬಿಡುಗಡೆಗೆ ಒತ್ತಾಯಿಸಿ ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ‌್ಯನಿರ್ವಹಿಸುತ್ತಿರುವ ಸ್ಟಾಫ್‌ನರ್ಸ್, ಡಿ-ಗ್ರೂಪ್ ಹಾಗೂ ಆಂಬುಲೆನ್ಸ್ ಚಾಲಕರು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕಳೆದ ಒಂದು ವರ್ಷದಿಂದ ಸಂಬಳವಾಗಿಲ್ಲ. ಜಿಲ್ಲಾ ಆರೋಗ್ಯ ಸುರಕ್ಷಾ ಸಮಿತಿಯ ನಿಧಿಯಿಂದ ಕೊಡಲು ಅವಕಾಶವಿದ್ದರೂ ಸಂಬಳ ಕೊಟ್ಟಿಲ್ಲ. 11 ಸ್ಟಾಫ್‌ನರ್ಸ್, ಐವರು ಡಿ ಗ್ರೂಪ್ ಹಾಗೂ ಇಬ್ಬರು ಆಂಬುಲೆನ್ಸ್ ಚಾಲಕರಿಗೆ ನೇಮಕವಾದ ಮೊದಲ 4 ತಿಂಗಳ ನಂತರದಲ್ಲಿ ವೇತನವನ್ನು ಕೊಟ್ಟಿಲ್ಲ ಎಂದು ಹೇಳಿದರು.
ಇದರಿಂದ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ಆದ್ದರಿಂದ ಕೂಡಲೇ ಬಾಕಿ ವೇತನ ಬಿಡುಗಡೆ ಮಾಡುವಂತೆ ಕೋರಿ ಡಿಎಸ್ ಡಾ.ರವೀಂದ್ರ ಹಾಗೂ ಡಿಸಿ ಜಿ.ಆರ್.ಜೆ.ದಿವ್ಯಾಪ್ರಭು ಅವರಿಗೆ ನೌಕರರು ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ಮನವಿ ಆಲಿಸಿದ ಜಿಲ್ಲಾಧಿಕಾರಿ ಪರಿಶೀಲಿಸಿ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಪೂಜಾ, ತೇಜಸ್ವಿನಿ,ಪುಷ್ಪಲತಾ, ವನಿತಾ, ಸರಿತಾ, ಡಿ.ನಾಗರಾಜ್, ಶಂಕರ್, ಸಂತೋಷ್, ಚನ್ನಮ್ಮ, ರಾಧಾ, ಹರ್ಷ, ಬಾಬು ಇತರರಿದ್ದರು.