ಜಿಲ್ಲೆ

ಮಕ್ಕಳಲ್ಲಿ ಹವ್ಯಾಸದ ಕೊರತೆಯಿಂದ ಮಾನಸಿಕ ಖಿನ್ನತೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಹವ್ಯಾಸಗಳ ಕೊರತೆಯಿಂದಾಗಿ ಮಾನಸಿಕ ಖಿನ್ನತೆಗಳು ಹೆಚ್ಚಾಗುತ್ತಿದೆ. ಪರಿಶ್ರಮದ ಕೊರತೆಯಿದೆ. ಏಕಾಂಗಿಯಾಗಿ ಬೆಳೆಯುವ ವಾತಾವರಣ ಕಾಣುತ್ತಿದ್ದು, ಸಮಾಜಮುಖಿಯಾದ ನಡತೆ ಕಡಿಮೆಯಾಗುತ್ತಿದೆ ಎಂದು ಡಾ. ಜಿ.ಎಸ್. ಚಂದ್ರಶೇಖರ್ ಹೇಳಿದರು.

ಸೋಮವಾರ ಅಂಬಲಪಾಡಿ ಗ್ಯಾಲರಿ ಶ್ರೀರಾಜರಾಂನಲ್ಲಿ ಕಲಾವಿದ ಸಕು ಪಾಂಗಾಳ ಸಮುದ್ರ ನಾಲಗೆಯಿಂದ ರಚಿಸಿದ ಶಿಲ್ಪ ಕಲಾಕೃತಿ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಕಲಾವಿದ ಸಕು ಪಾಂಗಾಳ ಕಲಾಕೃತಿ ಮಾರಾಟದ ಮೊತ್ತದಿಂದ ಕನ್ನಡ ಮಾಧ್ಯಮಶಾಲಾ ಮಕ್ಕಳಿಗೆ ಆಂಗ್ಲ ಭಾಷಾ ನಿಘಂಟು ಉಚಿತ ವಿತರಣೆ ಮಾಡಲು ಉದ್ದೇಶಿಸಿರುವುದು ಶ್ಲಾಘನೀಯ ಎಂದರು.

ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಅನುಪಮ ಶೆಟ್ಟಿ ಮಾತನಾಡಿ, ಮಕ್ಕಳಲ್ಲಿ ಪ್ರಕೃತಿಯ ವೀಕ್ಷಣೆ ಇಲ್ಲದೆ ಸೃಜನ ಶೀಲತೆ ಕಡಿಮೆಯಾಗುತ್ತಿದೆ ಎಂದರು. ಅತಿಥಿಗಳಾಗಿ ರಮೇಶ್ ಬೀಡು, ಕಲಾವಿದ ರಮೇಶ್ ರಾವ್, ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು. ಸಕು ಪಾಂಗಾಳ ಸ್ವಾಗತಿಸಿ ಕಾರ್ಯಕ್ರಮ ಸಂಯೋಜಿಸಿದರು. ಸ್ನೇಹ ಸುಬ್ರಮಣ್ಯ ವಂದಿಸಿದರು.