ಹುಬ್ಬಳ್ಳಿ: ಇಲ್ಲಿಯ ಹೆಗ್ಗೇರಿಯ ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ "ಮಕ್ಕಳ ರಕ್ಷಣೆ ಬಲಪಡಿಸುವುದರಲ್ಲಿ ಪೋಕ್ಸೋ ಕಾಯಿದೆ ಅನುಷ್ಠಾನ ಮತ್ತು ವಿಶ್ಲೇಷಣೆ' ಕುರಿತು ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಐಕ್ಯೂಎಸಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ. ಹಂದ್ರಾಳ ಇವರು ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಅನೇಕ ಕಾನೂನುಗಳಿದ್ದು ಅವುಗಳಲ್ಲಿ ಮಕ್ಕಳ ರಕ್ಷಣೆಗಾಗಿ ರಚಿತವಾಗಿರುವ ಪೋಕ್ಸೋ ಪ್ರಮುಖವಾಗಿದೆ. ಆಧುನಿಕ ಜಗತ್ತಿನಲ್ಲಿಯೂ ಸಹ ದೇವದಾಸಿ ಪದ್ದತಿ, ಬಾಲ್ಯವಿವಾಹ, ವರದಕ್ಷಿಣೆಯಂತಹ ಸಾಮಾಜಿಕ ಪಿಡುಗು ಆವರಿಸಿರುವುದು ದುರದೃಷ್ಟಕರ ಎಂದರು.
ಅತಿಥಿಗಳಾಗಿದ್ದ ಧರ್ಮಸ್ಥಳ ಸಂಘದ ಯೋಜನಾ ಅಧಿಕಾರಿ ಲೀಲಾಮೂರ್ತಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಳ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ರೂಪಾ ಇಂಗಳಹಳ್ಳಿ, ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮ, ಮೊಬೈಲ್ ನಲ್ಲಿ ಸಮಯ ವ್ಯಯ ಮಾಡುತ್ತಿರುವುದು ವಿಪರ್ಯಾಸ. ಹಾಗಾಗಿ ಅಮೂಲ್ಯ ಸಮಯ ಸದುಪಯೋಗ ಪಡಿಸಿಕೊಂಡು ಸಾರ್ಥಕ ಜೀವನ ಕಟ್ಟಿಕೊಳ್ಳಬೇಕೆಂದು ತಿಳಿಸಿದರು.
ಕಾನೂನು ಸಲಹೆಗಾರರಾದ ನೂರಜಹಾನ್ ಕಿಲ್ಲೇದಾರ, ಪೋಕ್ಸೋ ಕಾಯಿದೆ ಅನುಷ್ಠಾನದಲ್ಲಿ ಮಕ್ಕಳ ಕಲ್ಯಾಣ ಇಲಾಖೆಯ ಪಾತ್ರ ಕುರಿತು ಉಪನ್ಯಾಸ ನೀಡಿದರು. ಸರ್ಕಾರಿ ಅಭಿಯೋಜಕಿ ಗಿರೀಜಾ ತಮ್ಮಿನಾಳ, ಪೊಲೀಸ್ ಅಧಿಕಾರಿ ಬಿ.ಎ. ಜಾಧವ ಮಾತನಾಡಿದರು.
ವಾಣಿಜ್ಯ ಮಹಾವಿದ್ಯಾಲಯ ಪ್ರಾಂಶುಪಾಲ ಸಾಜಿದ್ ಹುಸೇನ್, ಸಂಯೋಜಕಿ ಪೂರ್ಣಿಮಾ ಕುರ್ಡಿಕೇರಿ, ಐ.ಕ್ಯೂ.ಎ.ಸಿ. ಸಂಯೋಜಕ ಪ್ರೊ. ಬಾಬುಲಾಲ ದರಗದ, ಡಾ. ದೀಪಾ ಪಾಟೀಲ, ಸುರೇಶ ಲಿಂಬಿಕಾಯಿ, ಸತೀಶ ಸಿ.ವಿ., ಸುರೇಶ ಲಮಾಣಿ, ಸಿಬ್ಬಂದಿ ಉಪಸ್ಥಿತರಿದ್ದರು.
ಮಮತಾ ಕಲಾಲ ಪ್ರಾರ್ಥನೆ ಹಾಡಿದರು. ಭಾಗ್ಯಶ್ರೀ ಭಟ್ ಪರಿಚಯಿಸಿದರು. ಭೂಮಿಕಾ ವಂದಿಸಿದರು.