ಸಕಲೇಶಪುರ: ಪಟ್ಟಣದ ಮಾರುಕಟ್ಟೆಯಲ್ಲಿ ಸಾಂಬಾರ ಪದಾರ್ಥಗಳ ಧಾರಣೆ ಪಾತಾಳ ಕಂಡಿದ್ದು, ಬೆಳೆಗಾರರು, ವ್ಯಾಪಾರಿಗಳು ಚಿಂತಾಕ್ರಾಂತರಾಗಿದ್ದಾರೆ.
ಸಾಂಬಾರ ಪದಾರ್ಥಗಳ ರಾಜ ಎಂದು ಕರೆಸಿಕೊಳ್ಳುವ ಏಲಕ್ಕಿಗೆ ಸಕಲೇಶಪುರ ರಾಜ್ಯದ ಏಕೈಕ ಮಾರುಕಟ್ಟೆಯಾಗಿದ್ದರೆ, ಜಾಯ್‌ಪತ್ರೆ, ರಾಮಪತ್ರೆ ಹಾಗೂ ಲವಂಗಕ್ಕೂ ಪಟ್ಟಣವೇ ಪ್ರಮುಖ ಮಾರುಕಟ್ಟೆಯಾಗಿದೆ.
ಕರೊನಾ ಹಿನ್ನೆಲೆಯಲ್ಲಿ ಈಗ ಈ ಸಾಂಬಾರ ಪದಾರ್ಥಗಳ ಬೆಲೆ ಗಣನೀಯವಾಗಿ ಕುಸಿತ ಕಂಡಿದ್ದು, ಇದನ್ನೇ ನಂಬಿ ಬದುಕುತ್ತಿದ್ದ ಬೆಳೆಗಾರರು ಹಾಗೂ ವ್ಯಾಪಾರಿಗಳು ಬೀದಿಗೆ ಬೀಳುವ ಸ್ಥಿತಿ ಬಂದಿದೆ.
ಈ ವರ್ಷದ ಆರಂಭದಲ್ಲಿ ಏಲಕ್ಕಿ ಪ್ರತಿ ಕೆ.ಜಿ.ಗೆ 4 ಸಾವಿರದಿಂದ 4700 ರೂ.ವರೆಗೆ ಇದ್ದರೆ, ಕರೊನಾ ಸೋಂಕು ಆರಂಭದ ದಿನಗಳಾದ ಮಾರ್ಚ್‌ನಲ್ಲಿ ಮೂರು ಸಾವಿರ ರೂ.ಗಳ ಆಸುಪಾಸಿನಲ್ಲಿತ್ತು. ಇದೇ ಧಾರಣೆ ಜೂನ್ ಮೊದಲ ವಾರದವರೆಗೂ ಇತ್ತಾದರೂ ದುಬೈಗೆ ರಫ್ತಾಗುವುದು ಸ್ಥಗಿತಗೊಂಡಿರುವುದು, ಮದುವೆ, ಹಬ್ಬ-ಹರಿದಿನಗಳು ಹಾಗೂ ದೇವಸ್ಥಾನಗಳಲ್ಲಿ ಪೂಜೆ ಸ್ಥಗಿತಗೊಂಡಿರುವುದರಿಂದ ಏಲಕ್ಕಿ ಕೊಳ್ಳುವವರೇ ಇಲ್ಲದಂತಾಗಿದೆ.
ಒಂದೇ ವಾರದಲ್ಲಿ ಪ್ರತಿ ಕೆ.ಜಿ.ಏಲಕ್ಕಿಗೆ ಸಾವಿರ ರೂ.ಗಳಿಂದ 1600 ರೂ.ಗಳವರೆಗೆ ಕುಸಿತ ಕಂಡಿದ್ದು, 800 ರೂ.ಗಳಿಂದ 1200 ರೂ.ಗಳಾಗಿದೆ. ಇದೆ ಸ್ಥಿತಿ ಜಾಯ್‌ಪತ್ರೆಯದ್ದಾಗಿದ್ದು ವರ್ಷ ಆರಂಭದಲ್ಲಿ ಎರಡು ಸಾವಿರದಿಂದ ಎರಡು ಸಾವಿರದ ಐದನೂರುವರೆಗೆ ಇದ್ದ ಧಾರಣೆ ಈಗ ಸಾವಿರ ರೂ.ಗಳಾಗಿದ್ದರೆ, 1200 ರೂ.ಗಳಿದ್ದ ರಾಮಪತ್ರೆ ಧಾರಣೆ 700 ರೂ.ಗಳಾಗಿದೆ. ಲವಂಗ ಧಾರಣೆ 700 ರೂ.ಗಳಿಂದ 400 ರೂ.ಗಳಿಗೆ ಕುಸಿತ ಕಂಡಿದೆ.
17 ಎಸ್‌ಕೆಪಿಪಿ 1 ಏಲಕ್ಕಿ.