ಜಿಲ್ಲೆ

ಎಡಕುಮೇರಿ ಮಾರ್ಗ 5 ದಿನ ರೈಲು ಸಂಪರ್ಕ ಅನುಮಾನ; ಸಮರೋಪಾದಿಯಲ್ಲಿ ನಡೆಯುತ್ತಿದೆ ಹಳಿ ದುರಸ್ತಿ ಕಾಮಗಾರಿ

ವಿಜಯವಾಣಿ ಸುದ್ದಿಜಾಲ ಮಂಗಳೂರು/ಸುಬ್ರಹ್ಮಣ್ಯ
ಸುಬ್ರಹ್ಮಣ್ಯ-ಸಕಲೇಶಪುರ ಮಾರ್ಗದಲ್ಲಿ ಎಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಹಳಿ ದುರಸ್ತಿ ಕಾಮಗಾರಿಗೆ ನಿರಂತರ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಐದು ದಿನ ಬೇಕಾಗಬಹುದು ಎಂದು ನೈರುತ್ಯ ರೈಲ್ವೆ ಮೂಲಗಳು ತಿಳಿಸಿವೆ.
ಸೋಮವಾರ ರಾತ್ರಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಕುರಿತು ವಿಭಾಗದ ತಂತ್ರಜ್ಞರು ವರದಿ ನೀಡಿದ್ದರು. ಆದರೆ ತಂದು ಹಾಕಿರುವ ಮಣ್ಣು , ಕಲ್ಲುಗಳು ಮಳೆ ನೀರಿಗೆ ಕೊಚ್ಚಿ ಹೋಗುತ್ತಿದೆ. ಸಾಮಾನ್ಯವಾಗಿ ಈ ಭಾಗದಲ್ಲಿ ತುರ್ತು ಸಂದರ್ಭ ಉಪಯೋಗಿಸಲು ಸುಮಾರು ವ್ಯಾಗನ್‌ಗಳಲ್ಲಿ ಜಲ್ಲಿಕಲ್ಲುಗಳನ್ನು ತುಂಬಿ ಸಕಲೇಶಪುರದಲ್ಲಿ ಸಿದ್ಧವಾಗಿಟ್ಟುಕೊಂಡು ಇರುತ್ತೇವೆ. ಆದರೆ ಈ ಸಂಗ್ರಹ ಸಾಕಾಗುವುದಿಲ್ಲ. ಬಂಡೆಕಲ್ಲುಗಳನ್ನು ಕೂಡ ಉಪಯೋಗಿಸುತ್ತಿದ್ದೇವೆ. ಭೂಕುಸಿತದಿಂದ ಸುಮಾರು 50 ಮೀ. ರೈಲ್ವೆ ಹಳಿ ಮಣ್ಣಿನ ಜತೆ ಕುಸಿದಿದ್ದು, ಈ ಭಾಗವನ್ನು ಕೆಳಗಿನಿಂದಲೇ ಮರುನಿರ್ಮಿಸಬೇಕಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶನಿವಾರವೂ ಹಾಸನ-ಶಾಂತಿಗ್ರಾಮ ನಡುವೆ ಅಲ್ಪ ಮಣ್ಣುಕುಸಿತ ಸಂಭವಿಸಿತ್ತು. ಇದರಿಂದ ಗೂಡ್ಸ್ ರೈಲು(12419/12502) ಅಲ್ಪ ಪ್ರಮಾಣದಲ್ಲಿ ತೊಂದರೆಗೆ ಸಿಲುಕಿತ್ತು. ಯಾವುದೇ ಹಾನಿಯಾಗಿಲ್ಲ.
 *430 ಸಿಬ್ಬಂದಿ ನಿಯೋಜನೆ:
 ತುರ್ತು ಪರಿಸ್ಥಿತಿ ನಿಭಾಯಿಸಲು 430 ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಹಗಲು ಪಾಳಿಯಲ್ಲಿ 200, ರಾತ್ರಿ ಪಾಳಿಯಲ್ಲಿ 120 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. 110 ಸಿಬ್ಬಂದಿಯನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿದೆ. ಗಾಳಿ ತುಂಬಬಹುದಾದ ಟೆಂಟ್, ರೈನ್‌ಕೋಟ್‌ಗಳು, ಸುರಕ್ಷತಾ ಬೂಟುಗಳು, ತಾತ್ಕಾಲಿಕ ಶೌಚಗೃಹ ಮತ್ತು ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಗಿದೆ.
*ಆಹಾರ, ವೈದ್ಯಕೀಯ ವ್ಯವಸ್ಥೆ:
ನಾಲ್ವರು ಅಡುಗೆಯವರು ಸ್ಥಳದಲ್ಲಿದ್ದು, ಊಟ, ಉಪಹಾರ ತಯಾರಿಸುತ್ತಿದ್ದಾರೆ. ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಹೆಚ್ಚುವರಿ ಆಹಾರ ಪ್ಯಾಕೆಟ್ ಮತ್ತು ನೀರಿನ ಬಾಟಲಿಗಳನ್ನು ಸರಬರಾಜು ಮಾಡಲಾಗುತ್ತಿದೆ. ವೈದ್ಯರು, ದಾದಿಯರು ಒಳಗೊಂಡಿರುವ ವೈದ್ಯಕೀಯ ತಂಡ ಸಂಪೂರ್ಣ ಶ್ರೇಣಿಯ ವೈದ್ಯಕೀಯ ಸರಬರಾಜುಗಳೊಂದಿಗೆ ಸೈಟ್‌ನಲ್ಲಿದೆ. 8 ಆರೋಗ್ಯ ವೃತ್ತಿಪರರ ಹೆಚ್ಚುವರಿ ತಂಡ ಸಕಲೇಶಪುರ ರೈಲು ನಿಲ್ದಾಣದಲ್ಲಿ ಬೀಡುಬಿಟ್ಟಿದ್ದು, ಎರಡು ಪಾಳಿಯಲ್ಲಿ ಹಗಲಿರುಳು ಕಾರ್ಯನಿರ್ವಹಿಸುತ್ತಿದೆ.
*ಸಲಕರಣೆ, ಸರಬರಾಜು:
8 ಪೋರ್ಟೆಬಲ್ ಜನರೇಟರ್, 60ಕ್ಕೂ ಹೆಚ್ಚು ಫ್ಲಡ್‌ಲೈಟ್, 8 ಟಾರ್ಚ್, 10 ಎಕ್ಸ್‌ಟೆನ್ಶನ್ ಬೋರ್ಡ್ ಮತ್ತು 140 ಲೀಟರ್ ಪೆಟ್ರೋಲ್ ಜತೆಗೆ ಗ್ಯಾಸ್‌ಕಟ್ಟರ್‌ಗಳನ್ನು ಪೂರೈಸಲಾಗಿದೆ. ಕಂಟ್ರೋಲ್ ಫೋನ್, ಉಪಗ್ರಹ ಆಧಾರಿತ ಫೋನ್‌ಗಳು, ವೈಫೈ ಮತ್ತು ವಿಎಸ್‌ಎಟಿ ಸಂವಹನ(ಲೈವ್ ಸ್ಟ್ರೀಮಿಂಗ್‌ಗಾಗಿ) ಸೇರಿದಂತೆ ಸಂವಹನ ವ್ಯವಸ್ಥೆಗಳು ನಿರಂತರ ಮೇಲ್ವಿಚಾರಣೆ ಮತ್ತು ಸಮನ್ವಯಕ್ಕಾಗಿ ಹುಬ್ಬಳ್ಳಿಯ ಹೆಡ್‌ಕ್ವಾರ್ಟರ್ಸ್‌ನಲ್ಲಿರುವ ವಾರ್‌ರೂಂನಿಂದ ಕಾರ್ಯನಿರ್ವಹಿಸುತ್ತಿವೆ. 6 ಹಿಟಾಚಿ ಯಂತ್ರಗಳು ಹಳಿ ಮರುಸ್ಥಾಪಿಸಲು ತಡೆರಹಿತವಾಗಿ ಕಾರ್ಯನಿರ್ವಹಿಸುತ್ತಿವೆ.
-----
ಪರ್ಯಾಯ ಮಾರ್ಗ ರೈಲಿಗೆ ಬೇಡಿಕೆ


ಕರ್ನಾಟಕ ಕರಾವಳಿಯ ರೈಲುಮಾರ್ಗ ಪೂರ್ಣ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ-ಸಕಲೇಶಪುರ ಮಾರ್ಗ ಸಹಜ ಸ್ಥಿತಿಗೆ ಮರಳುವ ತನಕ ಮಂಗಳೂರು-ವಿಜಯಪುರ ಮತ್ತು ಬೆಂಗಳೂರು-ಮುರ್ಡೇಶ್ವರ ಮಾರ್ಗದ ಪ್ರಯಾಣಿಕರಿಗೆ ಹುಬ್ಬಳ್ಳಿ-ಮಡಗಾಂವ್ ಮೂಲಕ ರಾಜಧಾನಿಗೆ ಪರ್ಯಾಯ ಮಾರ್ಗದಲ್ಲಿ ರೈಲು ಓಡಿಸುವಂತೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಮತ್ತು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರನ್ನು ವಿನಂತಿಸಿ ಕರ್ನಾಟಕ ರೈಲ್ವೆ ಬಳಕೆದಾರರ ಸಂಘ ಟ್ವೀಟ್ ಮಾಡಿದೆ.
ಮಂಗಳೂರು-ಕಾರವಾರ-ಮಡಗಾಂವ್-ಲೋಂಡಾ-ಹುಬ್ಬಳ್ಳಿ-ಅರಸೀಕೆರೆ-ಬೆಂಗಳೂರು ಮಾರ್ಗದಲ್ಲಿ ರೈಲು ಓಡಿಸುವುದರಿಂದ ರಸ್ತೆ ಮಾರ್ಗದ ಮೇಲಿನ ಒತ್ತಡ ಕಡಿಮೆಯಾಗಲಿದೆ. ದಿಢೀರ್ ರಸ್ತೆ ಮಾರ್ಗ ಸಮಸ್ಯೆಯಾದರೆ ಕರ್ನಾಟಕ ಕರಾವಳಿ-ಬೆಂಗಳೂರು ಸಂಪರ್ಕ ತೀವ್ರ ತೊಂದರೆಯಾಗುವುದು ಕೂಡ ತಪ್ಪುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ಭೂಕುಸಿತ ಹಿನ್ನೆಲೆಯಲ್ಲಿ ಮಾರ್ಗದ ಹೆಚ್ಚಿನ ರೈಲುಗಳ ಪ್ರಯಾಣವನ್ನು ನಿರ್ದಿಷ್ಟ ದಿನದ ತನಕ ಪೂರ್ಣ ರದ್ದುಪಡಿಸಲಾಗಿದ್ದು, ಇನ್ನು ಕೆಲವು ರೈಲುಗಳಿಗೆ ಕೇರಳ ಮೂಲಕ ಬದಲಿಮಾರ್ಗ ಸೂಚಿಸಲಾಗಿದೆ.

-----ಬಾಕ್ಸ್------
 ಸ್ಥಗಿತಗೊಂಡ ರೈಲುಗಳು
ಯಶವಂತಪುರ-ಮಂಗಳೂರು(16539), ಕಾರವಾರ-ಯಶವಂತಪುರ(16516), ಮಂಗಳೂರು ಜಂಕ್ಷನ್ ಯಶವಂತಪುರ(16540), ಮಂಗಳೂರು ಸೆಂಟ್ರಲ್-ವಿಜಯಪುರ(07378), ವಿಜಯಪುರ-ಮಂಗಳೂರು ಸೆಂಟ್ರಲ್(07377), ಎಸ್‌ಎಂವಿಟಿ ಬೆಂಗಳೂರು-ಕಾರವಾರ(06568), ಎಸ್‌ಎಂವಿಟಿ ಬೆಂಗಳೂರು-ಮುರ್ಡೇಶ್ವರ(16585), ಮುರ್ಡೇಶ್ವರ-ಎಸ್‌ಎಂವಿಟಿ ಬೆಂಗಳೂರು-(16586), ಯಶವಂತಪುರ-ಮಂಗಳೂರು ಜಂಕ್ಷನ್(16575), ಮಂಗಳೂರು ಜಂಕ್ಷನ್-ಯಶವಂತಪುರ(16576), ಮಂಗಳೂರು ಸೆಂಟ್ರಲ್-ವಿಜಯಪುರ(07378), ಬೆಂಗಳೂರು-ಕಣ್ಣೂರು(16511), ಬೆಂಗಳೂರು-ಕಾರವಾರ(16595), ಕಣ್ಣೂರು-ಬೆಂಗಳೂರು(16512) ರೈಲುಗಳು ರದ್ದಾಗಿದೆ. ಉಳಿದಂತೆ ಕಣ್ಣೂರು-ಬೆಂಗಳೂರು(16512), ಕಾರವಾರ-ಬೆಂಗಳೂರು(16596), ಮುರ್ಡೇಶ್ವರ-ಬೆಂಗಳೂರು(16586) ಪಥ ಬದಲಿಸಿ ಚಲಿಸುತ್ತಿದೆ