ಜಿಲ್ಲೆ

ಭಾರತೀಯ ಸಾಹಿತ್ಯದಲ್ಲಿ ಸಖಿ ಗೀತಕ್ಕೆ ಉನ್ನತ ಸ್ಥಾನ

ವಿಜಯವಾಣಿ ಸುದ್ದಿಜಾಲ ಧಾರವಾಡ

ವರಕವಿ ಡಾ. ದ.ರಾ. ಬೇಂದ್ರೆ ಶಬ್ದ ಗಾರುಡಿಗ. ಶಬ್ದಗಳ ಮೂಲಕ ಲೀಲಾಜಾಲವಾಗಿ ನಮ್ಮನ್ನು ಕವಿತೆಯ ಆಳಕ್ಕೆ ಕರೆದೊಯ್ದವರು. ಕನ್ನಡಕ್ಕೆ ಭುವನದ ಭಾಗ್ಯ ಬಂದಿದ್ದು ಬೇಂದ್ರೆಯವರ ಕಾವ್ಯದಿಂದ. ಬೇಂದ್ರೆಯವರ ಕಾವ್ಯ ಭಾವಗೀತೆಗಳು ನವ ಮನ್ವಂತರಕ್ಕೆ ಕಾರಣವಾಯಿತು ಎಂದು ಹಿರಿಯ ಸಾಹಿತಿ ಡಾ. ಜಿ.ಎಂ.ಹೆಗಡೆ ಅಭಿಪ್ರಾಯಪಟ್ಟರು.

ನಗರದ ಸಾಧನಕೇರಿ ಬೇಂದ್ರೆ ಭವನದಲ್ಲಿ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್​ ವತಿಯಿಂದ ಶನಿವಾರ ಏರ್ಪಡಿಸಿದ್ದ ವರಕವಿ ಡಾ. ದ.ರಾ.ಬೇಂದ್ರೆ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೇಂದ್ರೆಯವರ ಕವಿತೆಗಳ ಸಾಲುಗಳು ನಮ್ಮನ್ನು ಸಮ್ಮೋಹನಗೊಳಿಸಿವೆ. ಸಖಿ ಗೀತವು ಉತ್ಕೃಷ್ಟವಾದ ಖಂಡ ಕಾವ್ಯವಾಗಿದೆ. ಭಾರತೀಯ ಸಾಹಿತ್ಯದಲ್ಲಿ ಅದಕ್ಕೆ ಮಹೋನ್ನತ ಸ್ಥಾನವಿದೆ. ಬೇಂದ್ರೆಯವರು ಬರೆದ 1427 ಕವನಗಳನ್ನೊಳಗೊಂಡ ಔದುಂಬರ ಗಾಥೆಯ ಆರು ಬೃಹತ್​ ಸಂಪುಟಗಳು ಅವರ ಜೀವನದ ಮಹಾ ಕಾವ್ಯವಾಗಿದೆ. ಬೇಂದ್ರೆ ಹಾಗೂ ಕುವೆಂಪು ಕನ್ನಡದ ಭಾವಗೀತದ ಮಹಾ ಕವಿಗಳು. ಬೇಂದ್ರೆಯವರ ಕವನಗಳು ಮುಂದಿನ ಎಲ್ಲ ಕವಿಗಳಿಗೆ ಮಾರ್ಗದಶಿರ್ಯಾಗುವುದರ ಮೂಲಕ, ಕನ್ನಡ ಕಾವ್ಯಕ್ಕೆ ಹೊಸ ದೆಸೆ ಕಲ್ಪಿಸಿಕೊಟ್ಟರು ಎಂದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್​ ಅಧ್ಯ ಡಾ.ಡಿ.ಎಂ.ಹಿರೇಮಠ ಮಾತನಾಡಿ, ಬೇಂದ್ರೆಯವರು ಆಧುನಿಕ ಕನ್ನಡ ಸಾಹಿತ್ಯದ ಅಗ್ರಕವಿ. ಕಾವ್ಯ ಮಾತ್ರವಲ್ಲದೆ, ನಾಟಕ, ವಿಮರ್ಶೆ, ಕಾವ್ಯ ಮೀಮಾಂಸೆ, ವಿಚಾರ ಸಾಹಿತ್ಯ, ಸಂಶೋಧನಾ ಪ್ರಬಂಧ, ಉಪನ್ಯಾಸಗಳು ಇವರ ಸಾಹಿತ್ಯ ಪ್ರಕಾರಗಳಾಗಿವೆ ಎಂದರು.

ವಿಜಯಪುರದ ಜ್ಯೋತಿರ್ಲಿಂಗ ಹೊನಕಟ್ಟಿ ಅವರು ಬೇಂದ್ರೆ ಭಾವಗೀತೆಗಳನ್ನು ಪ್ರಸ್ತುತ ಪಡಿಸಿದರು. ಸುರೇಶ ಕುಲಕರ್ಣಿ, ಮಲ್ಲಿಕಾರ್ಜುನ ಹಿರೇಮಠ, ಡಾ.ಎ.ಎಲ್​.ದೇಸಾಯಿ, ಎಂ.ಎಂ.ಚಿಕ್ಕಮಠ, ಎನ್​.ಎಸ್​.ಗೋವಿಂದರೆಡ್ಡಿ, ಸಿದ್ದಣ್ಣ ಕಂಬಾರ, ಶಂಕರ ಗುರವ, ಸಂಗಮೇಶ ಹಡಪದ, ಡಾ.ಜಿ.ಕೆ.ಹಿರೇಮಠ, ಎಂ.ಜಿ. ಹಿರೇಮಠ, ಎಂ.ವಿ. ಹೊಸಮನಿ, ಎಸ್​.ಎಸ್​. ಬಂಗಾರಿಮಠ, ಶಿವಾನಂದ ಹಡಪದ, ಚಂದ್ರಣ್ಣವರ, ಶೋಭಾ ದೇಶಪಾಂಡೆ, ಇತರರು ಇದ್ದರು.

ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.