ಸಕಲೇಶಪುರ: ಪಟ್ಟಣದ ಸಕಲೇಶ್ವರಸ್ವಾಮಿ ರಥೋತ್ಸವ ಭಾನುವಾರ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಆದ್ದೂರಿಯಾಗಿ ನೆರವೇರಿತು
ಹಲವು ವಿಧಿ-ವಿಧಾನದ ನಂತರ ವಿಧ್ಯುಕ್ತವಾಗಿ ಶಾಸಕ ಸಿಮೆಂಟ್ ಮಂಜು ಬೆಳಗ್ಗೆ 11ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಿದರು. ಮಧ್ಯಾಹ್ನ 12.30ಕ್ಕೆ ಮುಖ್ಯರಸ್ತೆಯಲ್ಲಿ ಸಾಗಿಬಂದ ರಥಕ್ಕೆ ಜನರು ಆರತಿ ಎತ್ತಿ ದೇವರಿಗೆ ನಮಿಸಿದರು. ಮಧ್ಯಾಹ್ನ 2.30ರವರೆಗೆ ನೂರಾರು ಭಕ್ತಾದಿಗಳು ಪಟ್ಟಣದ ಪುರಸಭೆ ಕಚೇರಿವರೆಗೆ ರಥವನ್ನು ಎಳೆದು ತಂದರು. ಸಾವಿರಾರು ಜನರು ರಥೋತ್ಸವ ಕಣ್ತುಂಬಿಕೊಂಡರು. ತೇರಿಗೆ ಹಣ್ಣು-ದವನ ಎಸೆದರು. ಕೆಲವರು ರಥದ ಮುಂದೆ ಇಡುಗಾಯಿ ಹೊಡೆದು ಭಕ್ತಿ ಮೆರೆದರು. ಡೊಳ್ಳು ಕುಣಿತಕ್ಕೆ ಯುವ ಜನತೆ ಕುಣಿದು ಕುಪ್ಪಳಿಸಿದರು.
ಅನ್ನಸಂತರ್ಪಣೆ: ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಪುರಸಭೆ ಮುಂಭಾಗದವರೆಗೆ ಆರ್‌ಎಸ್‌ಎಸ್, ಬಜರಂ
ಗದಳ ಸೇರಿದಂತೆ ಹಲವಾರು ಸಂಘಟನೆಗಳು, ಸಂಘ ಸಂಸ್ಥೆಗಳು ಅನ್ನಸಂತರ್ಪಣೆ ಮಾಡಿದವು. ಸಾಮಾನ್ಯವಾಗಿ ಸಕಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಪ್ರತಿ ವರ್ಷ ಗುರುವಾರದಂದು ನಡೆಯುತ್ತಿತ್ತು. ಈ ಬಾರಿ ಭಾನುವಾರ ರಥೋತ್ಸವ ಜರುಗಿದ್ದರಿಂದ ಹೆಚ್ಚಿನ ಜನದಟ್ಟಣೆ ಕಂಡು ಬಂತು.
ರಥೋತ್ಸವದ ವೇಳೆ ಬೈಪಾಸ್‌ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಿದ್ದರಿಂದ ರಾಷ್ಟ್ರೀಯ ಹೆದ್ದಾರಿ-75ರ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ಲಘು ವಾಹನ ಸವಾರರಿಗೆ ಅನುಕೂಲವಾಯಿತು. ಆದರೆ, ಭಾರಿ ವಾಹನಗಳು ಸಂಜೆವರೆಗೆ ಪಟ್ಟಣದ ಎರಡು ಬದಿಯಲ್ಲಿ ಕಾಯುವಂತಾಗಿತ್ತು.
ವಸ್ತುಪ್ರದರ್ಶನೆ ಬೇರೆಡೆ: ಸಕಲೇಶ್ವರಸ್ವಾಮಿ ರಥೋತ್ಸವದ ನಂತರ 10 ದಿನಗಳ ಕಾಲ ಸಕಲೇಶ್ವರಸ್ವಾಮಿ ದನಗಳ ಜಾತ್ರೆ ಹಾಗೂ ವಸ್ತುಪ್ರದರ್ಶನ ನಡೆಯುವುದು ವಾಡಿಕೆ. ಸಕಲೇಶ್ವರಸ್ವಾಮಿ ಜಾತ್ರೆ ಆರಂಭವಾದ 65 ವರ್ಷಗಳವರೆಗೆ ಸುಭಾಷ್ ಮೈದಾನದ ಸಮೀಪದ ಹಳೇ ಸಂತೆಮೈದಾನದಲ್ಲಿ ವಸ್ತುಪ್ರದರ್ಶನ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ, ವಸ್ತುಪ್ರದರ್ಶನ ನಡೆಯುತ್ತಿದ್ದ ಸ್ಥಳದ ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದು ಆ ಸ್ಥಳ ಖಾಸಗಿ ವ್ಯಕ್ತಿಗೆ ಸೇರಿದ್ದ ಎಂಬ ತೀರ್ಪಿ ಬಂದಿದೆ. ಈ ಹಿನ್ನೆಲೆಯಲ್ಲಿ ಬದಲಿ ಸ್ಥಳ ಆಯ್ಕೆಯಾಗಿ ತಾಲೂಕು ಆಡಳಿತ ಗಮನ ಹರಿಸಿದೆ. ಈ ಬಾರಿ ಪಟ್ಟಣದ ಹೃದಯಭಾಗದಲ್ಲಿರುವ ಖಾಸಗಿ ವ್ಯಕ್ತಿಗೆ ಸೇರಿದ ಟಾಟಾ ಲೇಔಟ್‌ನಲ್ಲಿ ಜಾತ್ರೆ ವಸ್ತುಪ್ರದರ್ಶನ ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕಾಗಿ ಹೆದ್ದಾರಿಯ ಒಂದು ಕಿ.ಮೀ.ವರೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಶನಿವಾರ ಬ್ರಹ್ಮರಥೋತ್ಸವ ಜರುಗಿತು.