ಸಕಲೇಶಪುರ: ನಾಲ್ಕನೇ ಸಕಲೇಶಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನವೆಂಬರ್‌ನಲ್ಲಿ ಆಯೋಜಿಸುವ ಬಗ್ಗೆ ಮಂಗಳವಾರ ಪಟ್ಟಣದ ಲಯನ್ಸ್ ಹಾಲ್‌ನಲ್ಲಿ ಕಸಾಪ ತಾಲೂಕು ಅಧ್ಯಕ್ಷೆ ಶಾರದಾ ಗುರುಮೂರ್ತಿ ನೇತೃತ್ವದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಮ್ಮೇಳನದಲ್ಲಿ ಮಲೆನಾಡು ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಸ್ಥಳ, ವಿಚಾರಗೋಷ್ಠಿಗಳ ಬಗ್ಗೆ ಮುಂದಿನ ಸಭೆಯಲ್ಲಿ ತಿರ್ಮಾನಗೊಳ್ಳಲು ಸಭೆ ನಿರ್ಣಯಿಸಿತು. ತಾಲೂಕಿನ ಎಲ್ಲ ಸಂಘಟನೆಗಳ ಸಹಕಾರ ಪಡೆಯುವುದು ಹಾಗೂ ತಾಲೂಕಿನ ಅಕ್ಷರ ಕೃಷಿಕನಿಗೆ ಸಮ್ಮೇಳನದ ಅಧ್ಯಕ್ಷ ಪಟ್ಟ ಕಟ್ಟುವ ಬಗ್ಗೆ ಚರ್ಚೆ ನಡೆಸಲಾಯಿತು.
ಕಾರ್ಯದರ್ಶಿ ಎಚ್.ಎಸ್.ಯೋಗೇಶ್, ರಂಗಕರ್ಮಿ ರಕ್ಷಿಧಿಪ್ರಸಾದ್, ಕಾದಂಬರಿಕಾರ ಗಿರಿಮನೆ ಶ್ಯಾಮರಾವ್, ಸಾಹಿತಿ ಯಡೇಹಳ್ಳಿ ಮಂಜುನಾಥ್, ಲಯನ್ಸ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ನಾರಾಯಣ್ ಆಳ್ವ, ಸಾಹಿತಿ ಲಲಿತಾ, ಜಾನೇಕೆರೆ ಸಾಗರ್ ಮುಂತಾದವರಿದ್ದರು.