ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಹಿಟ್ ಆ್ಯಂಡ್ ರನ್ ಮಸೂದೆ ವಾಪಸ್ ಪಡೆಯುವಂತೆ ಒತ್ತಾಯಿಸಿ ಸಕಲೇಶಪುರ ತಾಲೂಕು ಲಾರಿ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. 
ಜಿಲ್ಲೆ

ಹಿಟ್ ಆ್ಯಂಡ್ ರನ್ ಮಸೂದೆ ವಿರುದ್ಧ ಪ್ರತಿಭಟನೆ

ನಾಗೇಶ ಎಸ್

ಸಕಲೇಶಪುರ: ಚಾಲಕರ ಪಾಲಿಗೆ ಮರಣ ಶಾಸನವಾಗಿರುವ ಹಿಟ್ ಆ್ಯಂಡ್ ರನ್ ಮಸೂದೆ ವಿರುದ್ಧ ಪಟ್ಟಣದಲ್ಲಿ ಲಾರಿ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಅಪಘಾತಗಳು ಉದ್ದೇಶಪೂರ್ವಕವಾಗಿ ನಡೆಯುವುದಿಲ್ಲ. ಅಪಘಾತ ನಡೆದ ವೇಳೆ ಪ್ರಾಣಭಯದಿಂದ ಚಾಲಕರು ವಾಹನ ಬಿಟ್ಟು ಹೋಗುವುದು ಸಹಜ. ಇಂತಹ ಘಟನೆಗೆ 7 ಲಕ್ಷ ರೂ. ದಂಡ ವಿಧಿಸುವ ನೂತನ ಕಾಯ್ದೆ ಚಾಲಕರ ಪಾಲಿಗೆ ಮರಣಶಾಸನವಾಗಿದೆ. ಚಾಲಕರ ಬಳಿ 7 ಲಕ್ಷ ರೂ. ಇದ್ದರೆ ಬೇರೆ ಉದ್ಯೋಗ ಮಾಡುತ್ತಾರೆಯೇ ಹೊರತು ಯಾರೂ ಚಾಲಕರಾಗುವುದಿಲ್ಲ. ಇಂತಹ ಸಣ್ಣ ಜ್ಞಾನವು ಇಲ್ಲದೆ ಕಾನೂನು ಜಾರಿಗೆ ಹೊರಟಿರುವ ಕೇಂದ್ರ ಸರ್ಕಾರ ಬಡವರ ಹಾಗೂ ಶ್ರಮಿಕರ ವಿರೋಧಿಯಾಗಿದೆ ಎಂದು ಖಂಡಿಸಿದರು.

ಈ ಕಾನೂನು ಜಾರಿಗೊಳಿಸದಂತೆ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಮಸೂದೆ ವಾಪಸ್ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಜಾರಿಗೊಳಿಸಲು ಉದ್ದೇಶಿರುವ ಕಾನೂನು ಲಾರಿಗಳಿಗೆ ಮಾತ್ರವಲ್ಲದೆ ಸಣ್ಣ ಗೂಡ್ಸ್ ವಾಹನಗಳಿಗೆ ಅನ್ವಯವಾಗುತ್ತಿದ್ದು, ಈ ವಾಹನಗಳ ಚಾಲಕರು ಪ್ರತಿಭಟನೆಗೆ ಬೆಂಬಲ ನೀಡಬೇಕು ಎಂದು ಪ್ರತಿಭಟನಕಾರರು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಲೀಂ ಕೊಲ್ಲಹಳ್ಳಿ, ಲಾರಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ರಘು, ಉಪಾಧ್ಯಕ್ಷ ಮುದಾಸೀರ್, ನೂರುಲ್ಲ ಮುಂತಾದವರು ಇದ್ದರು.