???????????????????????????????????? 
ಜಿಲ್ಲೆ

ನ.30ರಿಂದ ಡಿ.19ರವರೆಗೆ ಸಕಾಲ ಸಪ್ತಾಹ

madikerimailmanju

ಚಿಕ್ಕಮಗಳೂರು: ಜಿಲ್ಲೆಯ ನಾಗರಿಕರಿಗೆ ನಿಗದಿತ ಕಾಲಮಿತಿಯಲ್ಲಿ ಸೇವೆ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಸಕಾಲ ಯೋಜನೆಯಡಿ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಸಕಾಲ ಅರ್ಜಿಗಳು ಹಾಗೂ ಮೇಲ್ಮನವಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವ ಸಲುವಾಗಿ ನ.30ರಿಂದ ಡಿ.19 ರವರೆಗೆ ಸಕಾಲ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.

ನ.30ರಿಂದ ಡಿ.5ರವರೆಗೆ ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಸಾರಿಗೆ ಇಲಾಖೆ ಒಳಗೊಂಡಂತೆ ನಾಲ್ಕು ಇಲಾಖೆಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಲೇವಾರಿ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಡಿ.7ರಿಂದ 11ರವರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಪ್ರಕರಣಗಳ ವಿಲೇವಾರಿ ಹಾಗೂ ಡಿ.14 ರಿಂದ 19ರವರೆಗೆ ಸಕಾಲ ವ್ಯಾಪ್ತಿಗೆ ಒಳಪಡುವ ಉಳಿದ ಎಲ್ಲ ಸರ್ಕಾರಿ ಇಲಾಖೆಗಳ ಪ್ರಕರಣಗಳ ಅರ್ಜಿ ವಿಲೇವಾರಿಗಳ ಕುರಿತಂತೆ ಸಪ್ತಾಹ ನಡೆಸಲಾಗುವುದು ಎಂದು ಹೇಳಿದ್ದಾರೆ.

ಹೊಸ ಮತ್ತು ಹಳೆ ಪ್ರಕರಣಗಳ ವಿಲೇವಾರಿ

ಸಪ್ತಾಹದಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಬಾಕಿ ಅರ್ಜಿಗಳು ಹಾಗೂ ಅವಧಿ ಮೀರಿ ಬಾಕಿ ಉಳಿಸಿಕೊಂಡ ಅರ್ಜಿಗಳ ವಿಲೇವಾರಿ ಮಾಡುವುದು, ಮೇಲ್ಮನವಿ ಇತ್ಯರ್ಥಪಡಿಸುವುದು, ಸಕಾಲದಲ್ಲಿ ಸ್ವೀಕರಿಸಿದ ಎಲ್ಲ ಹೊಸ ಹಾಗೂ ಹಳೆ ಪ್ರಕರಣಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು. ಸಂಬಂಧಿಸಿದ ಇಲಾಖೆಗಳಲ್ಲಿ ಸಕಾಲದಡಿ ಸ್ವೀಕೃತಿಯಾಗಿರುವ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ.

ನೋಂದಣಿ ಕಡ್ಡಾಯ

ಸಕಾಲದಲ್ಲಿ ಬರುವ ಅರ್ಜಿಗಳನ್ನು ಸಕಾಲದಡಿಯಲ್ಲಿಯೇ ಸ್ವೀಕರಿಸಬೇಕು. ಕೆಲವು ಇಲಾಖೆಗಳಲ್ಲಿ ಸಕಾಲದಡಿ ಸ್ವೀಕರಿಸದೇ ಇರುವುದರಿಂದ ಶೂನ್ಯ ಸ್ವೀಕೃತಿ ಆಗುತ್ತಿರುವುದು ಕಂಡು ಬರುತ್ತಿದೆ. ಆದ್ದರಿಂದ ಸಕಾಲದಲ್ಲಿ ಬರುವ ಅರ್ಜಿಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ಹೇಳಿದ್ದಾರೆ.

ವ್ಯಾಪಕ ಪ್ರಚಾರ ಅಗತ್ಯ

ಈಗಾಗಲೇ ಸ್ವೀಕರಿಸಿ ವಿಲೇಯಾಗದ ಅರ್ಜಿಗಳು ಹಾಗೂ ಹೊಸದಾಗಿ ಸ್ವೀಕರಿಸಿದ ಅರ್ಜಿಗಳನ್ನು ಈ ಸಪ್ತಾಹದಲ್ಲಿ ವಿಲೇ ಮಾಡಬೇಕು ಸಕಾಲ ಸಪ್ತಾಹ ಕಾರ್ಯಕ್ರಮ ಕುರಿತಂತೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಸಕಾಲ ಯೋಜನೆ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ಮತ್ತು ಜಾಗೃತಿ ಮೂಡಿಸಬೇಕು. ಆಯಾ ಇಲಾಖೆಗಳು ಕಡ್ಡಾಯವಾಗಿ ಸಪ್ತಾಹ ಅಂಗವಾಗಿ ಇಲಾಖೆಯ ಸೇವೆಗಳು, ವಿಲೇವಾರಿ ಸಮಯ ಕುರಿತಂತೆ ಇಲಾಖೆಗಳಲ್ಲಿ ನಾಮಫಲಕ ಅಳವಡಿಸಬೇಕು ಎಂದು ಅವರು ಸೂಚಿಸಿದ್ದಾರೆ.