ಕಮಲನಗರ ತಾಲೂಕಿನ ಹೊಳಸಮುದ್ರದಲ್ಲಿ ಭಾನುವಾರ ಆಷಾಢ ಹುಣ್ಣಿಮೆ ನಿಮಿತ್ತ ಸಂತ ಹರಿನಾಥ ಮಹಾರಾಜರ ಸಂಜೀವಿನಿ ಸಮಾಧಿಗೆ ಭಕ್ತರು ಪೂಜೆ ಸಲ್ಲಿಸಿದರು. 
ಜಿಲ್ಲೆ

ಹೊಳಸಮುದ್ರದಲ್ಲಿ ಸಂತ ಹರಿನಾಥ ಮಹಾರಾಜ ಜಾತ್ರೋತ್ಸವ

ಕಮಲನಗರ: ಹೊಳಸಮುದ್ರ ಗ್ರಾಮದಲ್ಲಿ ಭಾನುವಾರ ಆಷಾಢ ಹುಣ್ಣಿಮೆ ನಿಮಿತ್ತ ಸಂತ ಹರಿನಾಥ ಮಹಾರಾಜರ ಜಾತ್ರೋತ್ಸವ ಶುರುವಾಯಿತು. ಮಹಾರಾಜರ ಜೀವಂತ ಸಂಜೀವಿನಿ ಸಮಾಧಿಗೆ ಗೋಪಾಳರಾವ ಪಾಟೀಲ್ ಮತ್ತು ಸಮಿತಿ ಅಧ್ಯಕ್ಷ ಲಕ್ಷ್ಮಣ ಕದಮ ಪೂಜೆ ಸಲ್ಲಿಸಿದರು.

ಸಂತ ಹರಿನಾಥ ಮಹಾರಾಜರು ಹಿಂದು ಮುಸ್ಲಿಮರ ಮಧ್ಯೆ ಧಾರ್ಮಿಕ ಸಾಮರಸ್ಯ ಮೂಡಿಸಲು ಹಾಗೂ ಪ್ರೀತಿ ವಿಶ್ವಾಸದ ಬದುಕು ರೂಪಿಸಲು ಧರ್ಮ ಪ್ರಚಾರ ಕೈಗೊಂಡಿದ್ದರು. ಪರಮಶಿಷ್ಯ ಕೇಶವನಾಥ ಮಹಾರಾಜ ಜತೆ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಸಂಚರಿಸಿ ಸತ್ಯ, ಅಹಿಂಸೆ ಮತ್ತು ಭಕ್ತಿ ಮಾರ್ಗದ ಮೂಲಕ ಪರಮಾತ್ಮನನ್ನು ಒಲಿಸಿಕೊಳ್ಳಬೇಕು ಎಂದು ಸಾರಿ ಹೇಳಿದ್ದರು. ಗುರು-ಶಿಷ್ಯರ ಅನ್ಯೋನ್ಯ ಸಂಬಂಧದ ಪ್ರತೀಕವಾಗಿರುವ ಸಂಜೀವಿನಿ ಸಮಾಧಿಗೆ ಎಲ್ಲ ಧರ್ಮೀಯರು ಪೂಜಿಸುತ್ತಾರೆ ಎಂದು ಗೋಪಾಳರಾವ ಪಾಟೀಲ್ ಸ್ಮರಿಸಿದರು.

ಅರ್ಚಕ ಪ್ರವೀಣ ಮಹಾರಾಜ ಬೆಳಗ್ಗೆ ಸಮಾಧಿಗೆ ಅಭಿಷೇಕ ಮತ್ತು ಮಹಾರತಿ ಸಲ್ಲಿಸಿದರು. ಭಕ್ತರು ಸಮಾಧಿ ದರುಶನ ಪಡೆದು ಹರಕೆ ತೀರಿಸಲು ಸಕ್ಕರೆ ಮತ್ತು ಕೊಬ್ಬರಿ ಹಂಚಿದರು. ಭಕ್ತರಾದ ವಂದನಾ ರಮೇಶ ಅನ್ನದಾಸೋಹ ನಡೆಸಿಕೊಟ್ಟರು.