ಕುಶಾಲನಗರ: ಕೂಡಿಗೆಯ ಕೊಡಗು ಸೈನಿಕ ಶಾಲೆ ಮರಿಯಪ್ಪ ಕೆಂಪಯ್ಯ ಪುಟ್ಬಾಲ್ ಕ್ರೀಡಾಂಗಣದಲ್ಲಿ ಅಖಿಲ ಭಾರತ ಸೈನಿಕ ಶಾಲೆಗಳ ಫುಟ್ಬಾಲ್ ಕ್ರೀಡಾಕೂಟದ ಉದ್ಘಾಟನೆ ಸಮಾರಂಭ ಸೋಮವಾರ ನೆರವೇರಿತು.
ಶಾಲೆಯ ಪ್ರಾಂಶುಪಾಲ ಕ.ಅಮರ್ ಜೀತ್ ಸಿಂಗ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಇವರೊಂದಿಗೆ ಉಪಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಶಾಲಾ ವೈದ್ಯಾಧಿಕಾರಿ ಡಾ.ಚಿನ್ಮಯಿ, ಹಿರಿಯ ಶಿಕ್ಷಕ ವಿಬಿನ್ ಕುಮಾರ್ ಇದ್ದರು.
ಈ ಕ್ರೀಡಾಕೂಟದಲ್ಲಿ ತಮಿಳುನಾಡಿನ ಸೈನಿಕ ಶಾಲೆ ಅಮರಾವತಿನಗರ, ಕೇರಳದ ಸೈನಿಕ ಶಾಲೆ ಕಜಕೊಟ್ಟಂ, ಆಂಧ್ರಪ್ರದೇಶದ ಸೈನಿಕ ಶಾಲೆ ಕಲ್ಕೆರಿಯ ತಂಡಗಳು ಹಾಗೂ ಅತಿಥೇಯ ತಂಡ ಕೊಡಗು ಸೈನಿಕ ಶಾಲೆ ತಂಡಗಳು ಭಾಗವಹಿಸಿದ್ದವು. ಕಾರ್ಯಕ್ರಮದ ಮೊದಲಿಗೆ ಭಾಗವಹಿಸಿದ ತಂಡಗಳ ಸ್ಪರ್ಧಾಳುಗಳಿಂದ ಶಿಸ್ತುಬದ್ಧ ಪಥಸಂಚಲನ ನಡೆಯಿತು. ನಂತರ, ಕರ್ನಾಟಕದ ಪ್ರಸಿದ್ಧ ಜಾನಪದ ನೃತ್ಯಗಳಲ್ಲೊಂದಾದ ಡೊಳ್ಳುಕುಣಿತವನ್ನು ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳು ಪ್ರದರ್ಶಿಸಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಭಾಗವಹಿಸಿದ ಸ್ಪರ್ಧಾಳುಗಳು ತೋರಿದ ಶಿಸ್ತು, ಕ್ರೀಡಾಸ್ಫೂರ್ತಿ ಮತ್ತು ಉತ್ಸಾಹವನ್ನು ಪ್ರಶಂಸಿಸಿದರು. ಪ್ರಸ್ತುತ ಸ್ಪರ್ಧೆ ಕ್ರೀಡಾಸ್ಪೂರ್ತಿ ಹಾಗೂ ಸಾಂಘಿಕ ಹೋರಾಟದಿಂದ, ಆರೋಗ್ಯಯುತ ಮನಸ್ಸಿನೊಂದಿಗೆ ಕೂಡಿರಬೇಕು ಎಂಬ ಸಂದೇಶವನ್ನು ನೀಡಿದರು. ಇದರೊಂದಿಗೆ ಸ್ಪರ್ಧಾಳುಗಳು ಸ್ನೇಹಪೂರ್ವಕವಾದ ಹಾಗೂ ನ್ಯಾಯಯುತವಾದ ಆಟದ ಮೌಲ್ಯಗಳನ್ನು ಪಾಲಿಸಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ, ವಿವಿಧ ಸೈನಿಕ ಶಾಲೆಗಳ ಮೇಲ್ವಿಚಾರಕರು, ಶಾಲೆಯ ಎನ್‌ಸಿಸಿ ಸಿಬ್ಬಂದಿ , ದೈಹಿಕ ಶಿಕ್ಷಕರು ಹಾಗೂ ಶಾಲೆ ವಿದ್ಯಾರ್ಥಿಗಳು ಹಾಜರಿದ್ದರು.