ಜಿಲ್ಲೆ

ಕೂಡಿಗೆ ಸೈನಿಕ ಶಾಲೆಯಲ್ಲಿ ವಿವಿಧ ಆಸನ ಪ್ರದರ್ಶನ

ಎ. ಆರ್. ರಘುರಾಮ

ಕುಶಾಲನಗರ : ಕುಶಾಲನಗರ ತಾಲೂಕು ಕೂಡಿಗೆಯ ಕೊಡಗು ಸೈನಿಕ ಶಾಲೆಯ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಶನಿವಾರ ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್, ಆಡಳಿತಾಧಿಕಾರಿಯಾದ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್, ಉಪಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಶಾಲಾ ವೈದ್ಯಾಧಿಕಾರಿ ಡಾ. ಚಿನ್ಮಯ್, ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಬೋಧಕ-ಬೋಧಕೇತರ ವರ್ಗದವರು, ಎನ್‌ಸಿಸಿ ಸಿಬ್ಬಂದಿ ವರ್ಗ ಈ ಸಂದರ್ಭ ಯೋಗ ಮಾಡಿದ್ದು ವಿಶೇಷವಾಗಿತ್ತು.

ದೈಹಿಕ ಶಿಕ್ಷಣ ಶಿಕ್ಷಕ ಅನೂಪ್ ಚೌಹಾಣ್ ಅವರು ಆಯುಷ್ ಸಚಿವಾಲಯದಿಂದ ಅನುಮೋದಿತವಾದ ಯೋಗಾಸನದ ವಿವಿಧ ಆಸನಗಳ ಪ್ರದರ್ಶನ ನೀಡಿ ಭಾಗವಹಿಸಿದವರಿಗೆ ಮಾರ್ಗದರ್ಶನ ನೀಡಿದರು. ಯೋಗಾಸನವು ಆರೋಗ್ಯದಲ್ಲಿ ಸ್ಥಿರತೆ, ಶಿಸ್ತು ಹಾಗೂ ಆನಂದಮಯ ಜೀವನಕ್ಕೆ ಅತಿ ಅವಶ್ಯಕವೆಂಬ ಅರಿವನ್ನು ವಿದ್ಯಾರ್ಥಿಗಳಲ್ಲಿ ಕಾರ್ಯಕ್ರಮದ ಮೂಲಕ ಮೂಡಿಸಲಾಯಿತು. ವಿದ್ಯಾರ್ಥಿಗಳು ತಮ್ಮ ದೈನಂದಿನ ಬದುಕಿನಲ್ಲಿ ಯೋಗವನ್ನು ಅಳವಡಿಸಿಕೊಳ್ಳುವ ಅಗತ್ಯತೆಯೊಂದಿಗೆ ಪ್ರಕೃತಿಯೊಂದಿಗೆ ಸಹ-ಜೀವನ ನಡೆಸಬೇಕೆನ್ನುವ ಜಾಗೃತಿ ಮೂಡಿಸಲಾಯಿತು.