ಜಿಲ್ಲೆ

ಕೊಡಗು ಸೈನಿಕ ಶಾಲೆಯಲ್ಲಿ ಸಾಂಸ್ಕೃತಿಕ ಸ್ಪರ್ಧೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕೂಡಿಗೆಯ ಕೊಡಗು ಸೈನಿಕ ಶಾಲೆಯಲ್ಲಿ 2024-25ನೇ ಸಾಲಿನ ಅಂತರನಿಲಯ ಸಾಂಸ್ಕೃತಿಕ ಸ್ಪರ್ಧೆ ಬುಧವಾರ (ಏ. 9) ಮತ್ತು ಗುರುವಾರ (ಏ.10) ನಡೆಯಿತು. ವಿದ್ಯಾರ್ಥಿಗಳಲ್ಲಿನ ಪ್ರತಿಭೆ, ಸೃಜನಶೀಲತೆ ಮತ್ತು ದೇಶಾಭಿಮಾನದ ಪ್ರತೀಕವಾಗಿದ್ದ ಈ ಸ್ಪರ್ಧೆಯಲ್ಲಿ ವಿವಿಧ ಕಲೆ, ಸಂಸ್ಕೃತಿಯ ಅರಿವನ್ನು ಮಕ್ಕಳಲ್ಲಿ ಮೂಡಿಸುವ ಉದ್ದೇಶ ಹೊಂದಿತ್ತು. ಸ್ಪರ್ಧೆಯಲ್ಲಿ ಶಾಲೆಯ ಮೆನನ್, ಕಾರ್ಯಪ್ಪ, ಕಠಾರಿ ಹಾಗೂ ಸುಬ್ರತೋ ನಿಲಯಗಳು ಭಾಗವಹಿಸಿದ್ದವು.

ಸಮೂಹ ಗೀತೆಗಳು, ಸಮೂಹ ನೃತ್ಯಗಳು, ಸಮೂಹ ಜಾನಪದ ನೃತ್ಯಗಳು ಹಾಗೂ ಪರಮವೀರ ಚಕ್ರ ಪುರಸ್ಕೃತರ ಶೌರ್ಯದ ಕಥೆಗಳ ಆಧಾರಿತ ಕಿರು ನಾಟಕಗಳ ಮೂಲಕ ಆಕರ್ಷಕ ಪ್ರದರ್ಶನಗಳನ್ನು ತಂಡಗಳು ನೀಡಿದವು.

ಮೆನನ್ ನಿಲಯ ಎಲ್ಲ ವಿಭಾಗಗಳಲ್ಲಿ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್ ನಿಲಯವಾಗಿ ಹೊರಹೊಮ್ಮಿತು. ಗೆತೇಶ್ ಅತ್ಯುತ್ತಮ ನಟ, ಎನ್ ಆರ್ ಇ ಮನು ಅತ್ಯುತ್ತಮ ನಟಿ, ಸಂಪ್ರೀತ್ ಮತ್ತು ಸುಹಾನಿ ಅತ್ಯುತ್ತಮ ನಿರೂಪಕ ಪ್ರಶಸ್ತಿ ಪಡೆದುಕೊಂಡರೆ, ಮೆನನ್ ನಿಲಯ ಅತ್ಯತ್ತಮ ಸಂಪನ್ಮೂಲ ಬಳಕೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಭಾರ ಪ್ರಾಂಶುಪಾಲÀ ವಿಂಗ್ ಕಮಾಂಡರ್ ಪ್ರಕಾಶ್ ರಾವ್ ಮಾತನಾಡಿ ಶಾಲೆಯಲ್ಲಿರುವ ಸಂಪತ್ತನ್ನು ಸೃಜನಶೀಲವಾಗಿ ಉಪಯೋಗಿಸಿ ಇನ್ನಷ್ಟು ಸಾಧನೆಗಳನ್ನು ಮಾಡುವಂತೆ ಸ್ಪರ್ಧಿಗಳಿಗೆ ಕರೆನೀಡಿದರು.

ಶಾಲೆಯ ಉಪ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಶಾಲಾ ವೈದ್ಯಕೀಯ ಅಧಿಕಾರಿ ಡಾ. ಚಿನ್ಮಯಿ, ಹಿರಿಯ ಶಿಕ್ಷಕರಾದ ವಿಭಿನ್ ಕುಮಾರ್ ಇದ್ದರು.

ಸ್ಪರ್ಧೆಯ ತೀರ್ಪುಗಾರರಾಗಿ ದಿವ್ಯಾ ಸಿಂಗ್, ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕಿ ಕಾವೇರಿಯಮ್ಮ, ಅತ್ತೂರಿನ ಜ್ಞಾನಗಂಗಾ ವಸತಿ ಶಾಲೆಯ ಶಿಕ್ಷಕಿ ಶ್ರುತಿ ವಿಬಿನ್ ಕುಮಾರ್ ಕಾರ್ಯನಿರ್ವಹಿಸಿದರು.