ಕುಶಾಲನಗರ:
ಕೂಡಿಗೆಯ ಕೊಡಗು ಸೈನಿಕ ಶಾಲೆಯಲ್ಲಿ ಶುಕ್ರವಾರ ಮತ್ತು ಶನಿವಾರ 2024-25ನೇ ಸಾಲಿನ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟ ನಡೆಯಿತು. ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಕ್ರೀಡಾ ಜ್ಯೋತಿ ಬೆಳಗುವುದರ ಮೂಲಕ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಕ್ರೀಡಾ ಜ್ಯೋತಿ ರಿಲೇಯಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಸಾಹಿಲ್ ರಾಜ್, ಶಿವರಾಜ್, ವಿಠ್ಠಲ್, ಅಫ್ತಾಬ್, ಸಾನಿಕಾ, ಉದಯ್ ಹಾಗೂ ಪ್ರಜ್ವಲ್ ಪಾಲ್ಗೊಂಡಿದ್ದರು.
ಶಾಲೆಯ ಕ್ರೀಡಾ ನಾಯಕ ಸಾಹಿಲ್ ರಾಜ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿಕೊಡುವುದರೊಂದಿಗೆ ಕ್ರೀಡಾಕೂಟ ಪ್ರಾರಂಭಗೊAಡಿತು. ಈ ಸಂದರ್ಭದಲ್ಲಿ ಸಾಹಿಲ್ ರಾಜ್ ಸ್ಪರ್ಧಾಳುಗಳಿಗೆ ಪ್ರಮಾಣ ವಚನ ಬೋಧಿಸಿದರು, ನ್ಯಾಯಯುತ ಆಟ ಮತ್ತು ಶಿಸ್ತಿನ ಮೌಲ್ಯಗಳನ್ನು ಎತ್ತಿಹಿಡಿಯಲು ಪ್ರೇರೇಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಲ್ ಅಮರ್ ಜೀತ್ ಸಿಂಗ್ ಕ್ರೀಡಾ ಸ್ಪೂರ್ತಿ, ಸಹಿಷ್ಣುತೆಯೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಂಡು, ಗೆಲುವು ಮತ್ತು ಸೋಲಿನ ಆಚೆಗೆ ಕ್ರೀಡೆಗಳು ನೀಡುವ ಅಮೂಲ್ಯವಾದ ಪಾಠಗಳ ಮಹತ್ವವನ್ನು ಎಲ್ಲಾ ವಿದ್ಯಾರ್ಥಿಗಳು ಕಲಿಯಬೇಕೆಂದು ಕರೆ ನೀಡಿದರು. ವಿದ್ಯಾರ್ಥಿಗಳು ಕ್ರೀಡಾ ಸ್ಪರ್ಧೆಗಳಲ್ಲಿ ಮನಃಪೂರ್ವಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮತ್ತು ಸೌಹಾರ್ಧ ಕ್ರೀಡೆಯ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳು 4*100 ಮೀ ರಿಲೇ ಹಾಗೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಹಗ್ಗಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕ್ರೀಡಾ ಕೂಟದಲ್ಲಿ ಗಮನಾರ್ಹ ಕೌಶಲ್ಯ, ಚುರುಕುತನ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದ ಸುಬ್ರೊಟೊ ನಿಲಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಮುಖ್ಯ ಅತಿಥಿಗಳು ವಿಜೇತ ಸ್ಪರ್ಧಾಳುಗಳಿಗೆ ಪ್ರಶಸ್ತಿಪತ್ರ ಮತ್ತು ಪದಕಗಳನ್ನು ವಿತರಿಸಿ, ಅವರ ಶ್ರಮ ಮತ್ತು ಕ್ರೀಡಾ ಮನೋಭಾವವನ್ನು ಶ್ಲಾಘಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕರ್ನಲ್ ಅಮರ್ ಜೀತ್ ಸಿಂಗ್, ಪ್ರಾಮಾಣಿಕತೆ, ಧೈರ್ಯ, ಸಂಕಲ್ಪ ಮತ್ತು ಸಾಂಘಿಕ ಹೋರಾಟದ ಮೌಲ್ಯಗಳನ್ನು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಕ್ರೀಡೆಗಳು ಮತ್ತು ಇತರ ಕ್ಷೇತ್ರಗಳಲ್ಲಿನ ವೃತ್ತಿಜೀವನವನ್ನು ಹೊಂದುವAತೆ ಕರೆ ನೀಡಿದರು.
ದಿವ್ಯಾ ಸಿಂಗ್, ಉಪಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕರಾದ ಎನ್ ವಿಬಿನ್ ಕುಮಾರ್, ಬೋಧಕ-ಬೋಧಕೇತರ ಸಿಬ್ಬಂದಿ , ಎನ್ ಸಿ ಸಿ ಸಿಬ್ಬಂದಿ, ದೈಹಿಕ ಶಿಕ್ಷಕರು ಹಾಗೂ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.