ಗುಡಿಬಂಡೆ: ಸುಳ್ಳು ಆಶ್ವಾಸನೆ, ಭರವಸೆಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಚುನಾವಣಾ ಸಮಯದಲ್ಲಿ ಜನರಿಗೆ ಸ್ವರ್ಗ ತೋರಿಸುತ್ತೇವೆ ಎಂದು ಹೇಳಿ ಈಗ ನರಕಕ್ಕೆ ದೂಡುತ್ತಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್ ಬೇಸರಿಸಿದರು.
ತಾಲೂಕು ಎಲ್ಲೋಡು ಗ್ರಾಮದ ಎಲ್ಲೋಡು ಆದಿನಾರಾಯಣಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿಯಡಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಚಿಂತಾಮಣಿ - ಗೌರಿಬಿದನೂರು ರಸ್ತೆಯ (ರಾಜ್ಯ ಹೆದ್ದಾರಿ - 82) ಚೇಳೂರು, ಬಾಗೇಪಲ್ಲಿ, ಎಲ್ಲೋಡು, ಮಲ್ಲೇನಹಳ್ಳಿ ಕ್ರಾಸ್, ವಾಟದಹೊಸಹಳ್ಳಿ ರಸ್ತೆ ಮಾರ್ಗದಲ್ಲಿ 6 ಕೋಟಿ ರೂಪಾಯಿ ವೆಚ್ಚದ 3 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮುಂದಿನ ಬಜೆಟ್‌ನಲ್ಲಿ ರಾಜ್ಯದ ಜನರ ಮೇಲೆ ಎಷ್ಟು ಪ್ರಮಾಣದ ಸಾಲ ಹೊರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದ ಅವರು, ಕಾಂಗ್ರೆಸ್ ನಾಯಕರು ವಿಧಾನಸಭಾ ಚುನಾವಣೆ ವೇಳೆ ವಿವಿಧ ಯೋಜನೆ ಜಾರಿ ಮಾಡುವುದಾಗಿ, ಗ್ಯಾರಂಟಿ ಕೊಡುವುದಾಗಿ ಹೇಳಿ ಅಧಿಕಾರ ಬಂದರು. ಆದರೆ, ಒಂದು ಕಡೆ ಗ್ಯಾರಂಟಿ ಕೊಟ್ಟು ಮತ್ತೊಂದು ಕಡೆ ಕಿತ್ತುಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಶಕ್ತಿ ಯೋಜನೆಯ ಗ್ಯಾರಂಟಿ ಹೆಸರಿನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕೊಟ್ಟು, ಪುರುಷರಿಂದ ಹೆಚ್ಚುವರಿ ಟಿಕೆಟ್ ದರ ಪಡೆದುಕೊಳ್ಳುತ್ತಿದೆ. ಜತೆಗೆ ಬೆಂಗಳೂರಿನ ಮೆಟ್ರೋ ರೈಲು ಪ್ರಯಾಣ ದರ ಏರಿಕೆ ಮಾಡಿ, ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದೆ ಎಂದು ಆರೋಪಿಸಿದರು.
ಸಮಾಜ ಸೇವಕ ಹರಿನಾಥರೆಡ್ಡಿ, ಮುಖಂಡರಾದ ಕೋನಪ್ಪರೆಡ್ಡಿ, ಚೆನ್ನಕೃಷ್ಣಾರೆಡ್ಡಿ, ಅಶ್ವತ್ಥರೆಡ್ಡಿ, ಮದ್ದರೆಡ್ಡಿ, ಬೈರಾರೆಡ್ಡಿ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥರೆಡ್ಡಿ ಸೇರಿ ಹಲವರು ಇದ್ದರು.
ಬೆಲೆ ಏರಿಕೆ
ರಾಜ್ಯ ಸರ್ಕಾರ ಕಂದಾಯ ಇಲಾಖೆಯಲ್ಲಿ ನೋಂದಣಿ ಶುಲ್ಕ ಏರಿಸಿದೆ. ಹಿಂದಿನ ಸರ್ಕಾರಕ್ಕೆ ಹೋಲಿಕೆ ಮಾಡಿದರೆ ಇದು ಶೇ.40-50 ಹೆಚ್ಚಳವಾಗಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಸರ್ಕಾರಿ ಸೌಲಭ್ಯಗಳು ಜನರಿಗೆ ಸಿಗುವುದು ದುಸ್ತರವಾಗಿದೆ. ಬಡವರಿಗೆ ಮನೆಗಳು ನೀಡುತ್ತಿಲ್ಲ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಜನರ ಮೇಲೆ ಸರ್ಕಾರ ಹೊರೆ ಏರುತ್ತಿದೆ ಎಂದು ಡಾ ಕೆ.ಸುಧಾಕರ್ ಎಂದರು.
ರಾಜ್ಯ ಸರ್ಕಾರ ದಿವಾಳಿ
ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತೆರಿಗೆ ಕಡಿತಗೊಳಿಸಿ ಅನುಕೂಲ ಮಾಡಿದೆ. ಈ ರೀತಿ ಜನಪರ ನಿರ್ಣಯ ತೆಗೆದುಕೊಳ್ಳುವುದು ಎನ್‌ಡಿಎ ಸರ್ಕಾರದಿಂದ ಮಾತ್ರ ಸಾಧ್ಯ. ಆದರೆ, ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಮಾಡಿದೆ. ಮಾ.7ರಂದು ಮಂಡನೆಯಾಗುವ ಬಜೆಟ್‌ನಲ್ಲಿ ಜನರು ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಎಂಬುದನ್ನು ನೋಡುವ ಬದಲು ಜನರ ಮೇಲೆ ಎಷ್ಟು ಸಾಲ ಹೊರಿಸಲಾಗುತ್ತಿದೆ ಎಂಬುದನ್ನು ನೋಡಬೇಕಿದೆ ಎಂದಯು ಡಾ.ಕೆ. ಸುಧಾಕರ್ ಹೇಳಿದರು.
ಶಿಷ್ಟಾಚಾರ ಪಾಲನೆಯಿಲ್ಲ
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಒಕ್ಕೂಟದ ವ್ಯವಸ್ಥೆ ಬಗ್ಗೆ ಗೌರವವಿಲ್ಲ. ಕೇಂದ್ರ ಸರ್ಕಾರದ ಅನುದಾನದಡಿ ಕೈಗೊಳ್ಳುವ ಕಾರ್ಯಕ್ರಮಗಳಿಗೆ ಸಂಸದರಿಗೆ ಮಾಹಿತಿ ನೀಡಬೇಕು. ಆದರೆ, ರಾಜ್ಯದಲ್ಲಿ ಯಾರೂ ಶಿಷ್ಟಾಚಾರ ಪಾಲಿಸುತ್ತಿಲ್ಲ. ಈ ಕುರಿತು ಅಧಿಕಾರಿಗಳಿಗೆ ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ಇದು ಸರಿಯಾಗದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದರು ಎಚ್ಚರಿಕೆ ನೀಡಿದರು.
ಶಿಷ್ಟಾಚಾರ, ಒಕ್ಕೂಟ ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲ ಎಂದು ಕೇಂದ್ರ ಸರ್ಕಾರ ಅನುದಾನ ನಿಲ್ಲಿಸಿದರೆ ಸರ್ಕಾರ ನಡೆಸಲು ಆಗುತ್ತದೆಯೇ?, ನಿಮ್ಮ ಮನೆಯಿಂದ ಅನುದಾನ ತಂದಿದ್ದರೆ ನಿಮ್ಮನ್ನು ಪ್ರಶ್ನಿಸುವುದೇ ಇಲ್ಲ. ಆದರೆ, ಇದು ಕೇಂದ್ರ-ರಾಜ್ಯ ಸರ್ಕಾರದ ಹಣ. ನಾನು ಎಂಟು ಕ್ಷೇತ್ರಗಳ ಜನರಿಂದ ಆಯ್ಕೆಯಾದವನು. ಇದು 8 ಕ್ಷೇತ್ರಗಳ ಜನತೆಗೆ ಮಾಡುವಂತಹ ಅವಮಾನ ಎಂದೇ ಭಾವಿಸಬೇಕಾಗುತ್ತದೆ ಎಂದು ಕಿಡಿಕಾರಿದರು.