ಜಿಲ್ಲೆ

ಸದಭಿರುಚಿಯ ವಿಶ್ಲೇಷಣೆಗಳೊಂದಿಗೆ ಸಮ್ಮೇಳನ ಯಶ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ತಾಲೂಕಿನ ಕನಸವಾಡಿಯಲ್ಲಿ ಆಯೋಜಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಜಿ.ಗೋಪಿನಾಥ್ ವೇದಿಕೆಯಲ್ಲಿ ತೆರೆಬಿದ್ದಿತು.

ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನದ ಸರ್ವಾಧ್ಯಕ್ಷ ಟಿ.ಕೆಂಪಣ್ಣ ಮಾತನಾಡಿ, ಎರಡು ದಿನಗಳ ಕಾಳ ನಾಡಿನ ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ಕುರಿತು ವಿವಿಧ ಸ್ತರಗಳಲ್ಲಿ ಗಂಭೀರ ಚರ್ಚೆಗಳು ನಡೆದಿವೆ. ಸಾಹಿತ್ಯದ ಆಲೋಚನೆಗಳು ವಿಭಿನ್ನ ವಲಯಗಳನ್ನು ಮುಟ್ಟುವ ಹೊಸ ಮಾದರಿಯೊಂದು ಸಮ್ಮೇಳನದ ಮೂಲಕ ಹೊರಬಂದಿದೆ. ಸಾಂಸ್ಕೃತಿಕ ಮತ್ತು ಸಾಹಿತ್ಯ ವಲಯದ ಸಮನ್ವಯದ ವೇದಿಕೆಯಂತಿದ್ದ ಸಮ್ಮೇಳನದಲ್ಲಿ ಸದಭಿರುಚಿಯ ವಿಶ್ಲೇಷಣೆಗಳು ನಡೆದಿವೆ. ಎಲ್ಲ ಹಂತಗಳಲ್ಲೂ ಸಮ್ಮೇಳನ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಘಟಕಗಳು, ಸ್ಥಳೀಯವಾಗಿ ಆಯೋಜನೆಯ ನೇತೃತ್ವ ವಹಿಸಿದ್ದ ಎಲ್ಲ ಸಾಹಿತ್ಯಾಸಕ್ತರು ಅಭಿನಂದನಾರ್ಹರು ಎಂದರು.

ಪುರಸ್ಕಾರ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ಮತ್ತು ದೇವನಹಳ್ಳಿ ತಾಲೂಕಿನ 40ಕ್ಕೂ ಹೆಚ್ಚು ಗಣ್ಯರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಧುರೆ ಹೋಬಳಿಯ ಹಿರಿಯ ಮುಖಂಡರು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 20ಕ್ಕೂ ಹೆಚ್ಚು ಗಣ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹೊಂಗಿರಣ ಸಮಾನ ಮನಸ್ಕರ ವೇದಿಕೆಯ ವೆಂಕಟಾಚಲಪತಿ, ನಿವೃತ್ತ ಮುಖ್ಯಶಿಕ್ಷಕ ರಾಮಯ್ಯ, ರವಿಕುಮಾರ್, ಕಾರಾಗೃಹ ಇಲಾಖೆ ನಿವೃತ್ತ ಅಧೀಕ್ಷಕ ಲಕ್ಷ್ಮೀನಾರಾಯಣ್, ವೀಣೆ ತಯಾರಕ ಉಮೇಶ್, ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಿ.ಶ್ರೀಕಾಂತ ಸೇರಿದಂತೆ ಮಧುರೆ ಹೋಬಳಿಯ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.