ಹುಬ್ಬಳ್ಳಿ: ಬಹುದೊಡ್ಡ ಇತಿಹಾಸ ಹೊಂದಿರುವ ಭಾರತದ ಸಂಸ್ಕೃತಿ, ಸಂಗೀತವು ಎಲ್ಲರಿಗೂ ಅಪ್ಯಾಯಮಾನವಾದುದು. ಇಂತಹ ವಿಶೇಷತೆಗಳ ನಮ್ಮ ದೇಶವು ಜಗತ್ತಿಗೆ ಮಾದರಿಯಾಗಿ ಹೊರಹೊಮ್ಮಿದೆ ಎಂದು ಥಟ್ ಅಂತ ಹೇಳಿ ಖ್ಯಾತಿಯ ವೈದ್ಯ ಸಾಹಿತಿ ಡಾ. ನಾ. ಸೋಮೇಶ್ವರ ಹೇಳಿದರು.
ಇಲ್ಲಿಯ ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ, ಸಾಹಿತ್ಯ ಪ್ರಕಾಶನವು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಸಾಹಿತ್ಯ ಭಂಡಾರದ ಕೀರ್ತಿಶೇಷ ಮ. ಅನಂತಮೂರ್ತಿ ಅವರ 27ನೇ ಪುಣ್ಯತಿಥಿ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ 13 ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಆಧುನಿಕ ಭಾರತದಲ್ಲಿಯೂ ಕೂಡ ಪ್ರತಿಯೊಬ್ಬರು ಉತ್ತಮ ಜೀವನ ಸಾಗಿಸಬೇಕು. ಬದುಕಿಗೆ ಸಂಬಂಧಿಸಿದ ಕೃತಿಗಳನ್ನು ಹೆಚ್ಚು ಓದಬೇಕು. ಆಗ ಅವರ ಬದುಕೂ ಬದಲಾವಣೆಯತ್ತ ಸಾಗುತ್ತದೆ. ಸಂಕಷ್ಟಗಳಿಂದ ಹೊರಬರಬಹುದು ಎಂದು ಸಲಹೆ ನೀಡಿದರು.
ಆರೋಗ್ಯಕರ ಬದುಕು ಕೂಡ ಇಂದಿನ ಅಗತ್ಯ. ಅನೇಕ ಲೇಖಕರು ಇದಕ್ಕೆ ಪೂರಕವಾಗಿ ಬರೆದು ಓದುಗರಿಗೆ ನೀಡಿದ್ದಾರೆ. ಗ್ರಂಥಗಳನ್ನು ಬಾಗಿನ ರೂಪದಲ್ಲಿ ಕಾಣಿಕೆ ನೀಡಬೇಕು. ಆಗ ಅನೇಕರು ಪುಸ್ತಕ ಓದುವ ಮನಸ್ಸು ಮಾಡುತ್ತಾರೆ. ಅದರಿಂದ ಓದುಗ ಸಮೂಹ ಹೆಚ್ಚಿಸಬಹುದು ಎಂದು ಅಭಿಪ್ರಾಯಪಟ್ಟರು.
ಗೌರವ ಸಮರ್ಪಣೆ: ಪೂರ್ಣಚಂದ್ರ ತೇಜಸ್ವಿ ಅವರ ಮೈಸೂರಿನ ಪುಸ್ತಕ ಪ್ರಕಾಶನಕ್ಕಾಗಿ ರಾಘವೇಂದ್ರ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಆಗಿನ ದಿನಗಳಲ್ಲಿ ಪ್ರಕಾಶನ ಅತ್ಯಂತ ಕಷ್ಟದ ಕೆಲಸ ಆಗಿತ್ತು. ಲೇಖಕರೇ ತಮ್ಮ ಕೃತಿಗಳನ್ನು ಪ್ರಕಟ ಮಾಡಬೇಕಾಗಿತ್ತು. ಕನ್ನಡ ಪುಸ್ತಕ ಪ್ರಕಟ ಮಾಡುವವರ ಸಂಖ್ಯೆ ಬಹಳ ವಿರಳವಾಗಿತ್ತು. ಸವಾಲಿನ ಕೆಲಸವನ್ನು ನಮ್ಮ ಪ್ರಕಾಶನ ಇಷ್ಟಪಟ್ಟು ಮಾಡುತ್ತ ಬಂದಿದೆ ಎಂದು ರಾಘವೇಂದ್ರ ಹೇಳಿದರು.
ಸಾಮಾಜಿಕ ಜಾಲತಾಣ ಪತ್ರಕರ್ತ ರವೀಂದ್ರ ಜೋಶಿ ಮಾತನಾಡಿ, ಇಂದಿನ ಧಾವಂತದ ಬದುಕಿನಲ್ಲಿ ಪುಸ್ತಕಗಳನ್ನು ಯಾರು ಓದುತ್ತಾರೆ ಎಂದು ಕೇಳುವವರೇ ಹೆಚ್ಚು. ಆದರೆ, ಈಗಿನ ಸವಾಲು, ಆತಂಕಗಳನ್ನು ಪೂರಕವಾಗಿ ಬಳಸಿಕೊಂಡು ಓದುಗರನ್ನು ತಲುಪಬಹುದು ಎಂದರು.
ಸಾಹಿತ್ಯ ಸಮೃದ್ಧವಾಗಿದೆ. ಒಳ್ಳೆಯದು ಬಹುಕಾಲ ಹೇಗೆ ಉಳಿಯುತ್ತದೆಯೋ ಹಾಗೆ ಉತ್ತಮ ಪುಸ್ತಕಗಳನ್ನು ಜನರು ಓದುತ್ತಾರೆ. ಪುಸ್ತಕ ಯಾವತ್ತೂ ದ್ವೇಷ ಮಾಡುವುದಿಲ್ಲ. ಅದು ಏಕಾಗ್ರತೆ ಬಯಸುತ್ತದೆ. ಅದನ್ನು ಕೊಟ್ಟರೆ ಖಂಡಿತ ಅದು ಸ್ನೇಹಿತನಾಗಿ ನಮ್ಮನ್ನು ಎಲ್ಲ ತಾಪತ್ರಯಗಳಿಂದ ಹೊರಗೆ ತರುತ್ತದೆ ಎಂದರು.
ಕುಮಾರವ್ಯಾಸ ಭಾರತ ಕಥಾ ಪ್ರಪಂಚ ಲೇಖಕ ಮಧುಕರ ಯಕ್ಕುಂಡಿ ಮಾತನಾಡಿ, ಕನ್ನಡದ ಬೃಹತ್ ಕೃತಿ ಇದಾಗಿದೆ. ಪುಸ್ತಕ ಪ್ರೀತಿ ಯಾವ ಕಾಲಕ್ಕೂ ಕಡಿಮೆಯಾಗಿಲ್ಲ ಎಂದರು.
ಭೀಮಗಾನ, ಹಾಡು ತೊರೆಯ ಜಾಡು ಕೃತಿಗಳ ಕುರಿತು ಚಿತ್ರಾ ಸಂತೋಷ ಅವರು ಮಾತನಾಡಿದರು. ಸುಮನ್ ಕಾದಂಬರಿ ಕುರಿತು ಸುಚೇತಾ ಗೌತಮ್, ಜೀವನ ಒಂದು ಪಯನ ಅದನ್ನು ಆನಂದಿಸಿ ಕುರಿತು ಡಾ. ರಾಜನ್ ದೇಶಪಾಂಡೆ, ಆಪರೇಶನ್ ಸಿಂದೂರ್ ಕುರಿತು ಶಿವಶಾಸ್ತ್ರಿ, ಚಂದ್ರಭಾಗಾ ಕುರಿತು ಶ್ರೀನಿಧಿ ಕರಣಂ ಅವರು ಮಾತನಾಡಿದರು.
ಪ್ರಾಸ್ತಾವಿಕ ಮಾತನಾಡಿದ ಸಾಹಿತ್ಯ ಭಂಡಾರದ ಎಂ.ಎ. ಸುಬ್ರಮಣ್ಯ ಅವರು, ಪುಸ್ತಕ ಪ್ರಕಾಶನ ಹಾಗೂ ಮಾರಾಟದ ಜತೆಗೆ ಸಾಹಿತ್ಯದ ಕೆಲಸವನ್ನು ಒಂದು ವ್ರತದಂತೆ ಮಾಡುತ್ತ ಬರಲಾಗಿದೆ. ಅನೇಕ ಲೇಖಕರನ್ನು ಹುಟ್ಟು ಹಾಕಿದ ಕೀರ್ತಿ ಸಾಹಿತ್ಯ ಭಂಡಾರಕ್ಕೆ ಇದೆ ಎಂದರು.
ಕೋಮಲ ನಾಡಿಗೇರ, ಸ್ವಸ್ತಿ ಪ್ರಾರ್ಥನೆ ಹಾಡಿದರು. ಪತ್ರಕರ್ತ ಗೋಪಾಲಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಡಾ. ಬಿ.ಎಸ್. ಮಾಳವಾಡ ವಂದಿಸಿದರು.