ಜಿಲ್ಲೆ

ಕಲಿಯುಗಕ್ಕೆ ದೊರೆತ ಕೊಡುಗೆ ದಾಸ ಪರಂಪರೆ...

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

'ಸಹಸ್ರಕಂಠ ಗಾಯನ' ನಾದೋತ್ಸವ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಕಲಿಯುಗದಲ್ಲಿ ನಾದಬ್ರಹ್ಮನಾದ ಶ್ರೀಕೃಷ್ಣನ ಉಪಾಸನೆ ಬಹಳ ಶ್ರೇಷ್ಠ. ಸಂಕೀರ್ತನೆ ಮೂಲಕ ಭಗವಂತನನ್ನು ಒಲಿಸಿಕೊಳ್ಳುವುದು ಈ ಯುಗದ ವಿಶೇಷ ಸಾಧನೆಯಾಗಿದೆ. ತ್ರೇತಾಯುಗ, ದ್ವಾಪರಯುಗದಲ್ಲಿ ನಾದೋಪಸಾನೆಯ ಉಲ್ಲೇಖವಿಲ್ಲ. ದಾಸ ಪರಂಪರೆಯು ಕಲಿಯುಗಕ್ಕೆ ದೊರೆತ ಕೊಡುಗೆಯಾಗಿದೆ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ರಾಜಾಂಗಣದಲ್ಲಿ ಪುರಂದರ ದಾಸರ ಆರಾಧನಾ ಮಹೋತ್ಸವದ ನಿಮಿತ್ತ ಪರ್ಯಾಯ ಪುತ್ತಿಗೆ ಮಠ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್​ ಉಡುಪಿ ತಾಲೂಕು ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಸಹಸ್ರಕಂಠ ಗಾಯನ ನಾದೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸಾಧಕರಿಗೆ 'ಶ್ರೀಕೃಷ್ಣಾನುಗ್ರಹ' ಪ್ರಶಸ್ತಿ

ಹಿರಿಯ ಕಲಾವಿದ ಮಧುರ್​ ಬಾಲಸುಬ್ರಹ್ಮಣ್ಯಂ ಹಾಗೂ ಅಮೆರಿಕದಲ್ಲಿ ನೆಲೆಸಿರುವ ಉಡುಪಿಯ ಖ್ಯಾತ ವೈದ್ಯ ರಾಮ್​ ಮೋಹನ್​ ರಾವ್​ ಹಾಗೂ ರಜಿನಿ ದಂಪತಿಗೆ ಶ್ರೀಗಳು 'ಶ್ರೀಕೃಷ್ಣಾನುಗ್ರಹ' ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದರು. ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.

ರಥಬೀದಿಯಲ್ಲಿ ಶೋಭಾಯಾತ್ರೆ

ಉಡುಪಿಯ ರಥಬೀದಿಯಲ್ಲಿ ಪರ್ಯಾಯ ಶ್ರೀಗಳ ಉಪಸ್ಥಿತಿಯಲ್ಲಿ ಪುರಂದರ ದಾಸರ ಮೂರ್ತಿಯೊಂದಿಗೆ ಭವ್ಯ ಶೋಭಾಯಾತ್ರೆ ನಡೆಯಿತು. ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ 100ಕ್ಕೂ ಅಧಿಕ ಭಜನಾ ಮಂಡಳಿಗಳ ಸಾವಿರಕ್ಕೂ ಹೆಚ್ಚು ಭಜಕರು ಪಾಲ್ಗೊಂಡಿದ್ದರು. ಪುರಂದರ ದಾಸರ ಹಾಡುಗಳೊಂದಿಗೆ ರಾಜಾಂಗಣದ ವರೆಗೆ ಮೆರವಣಿಗೆ ನಡೆಸಲಾಯಿತು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್​ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ್​ ಬಸ್ರೂರು, ಉಡುಪಿ ತಾಲೂಕು ಅಧ್ಯಕ್ಷ ವಿಜಯ್​ ಶೆಟ್ಟಿ ಕೊಂಡಾಡಿ, ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು, ಶ್ರೀ ಧರ್ಮಸ್ಥಳ ಸಂದ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ತಾಲೂಕು ಯೋಜನಾಧಿಕಾರಿ ರಾಮಾ ಎಂ., ಜಿಲ್ಲಾ ಸಮನ್ವಯಾಧಿಕಾರಿಗಳಾದ ರಾಘವೇಂದ್ರ ಮುದ್ರಾಡಿ, ಸಂತೋಷ್​ ಪಿ., ಮಠದ ದಿವಾನ ನಾಗರಾಜ್​ ಆಚಾರ್ಯ, ಶ್ರೀಗಳ ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​, ನರಸಿಂಹ ನಾಯಕ್​ ಮಣಿಪಾಲ್​ ಉಪಸ್ಥಿತರಿದ್ದರು.

ಭಜನಾ ಪರಿಷತ್​ ಪ್ರಧಾನ ಕಾರ್ಯದರ್ಶಿ ಶಿವಕುಮಾರ್​ ಅಂಬಲಪಾಡಿ ಸ್ವಾಗತಿಸಿದರು. ಮಠದ ವಿದ್ವಾಂಸ ಡಾ. ಗೋಪಾಲ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಗಮನ ಸೆಳೆದ ಮಧ್ವಾಚಾರ್ಯರು, ಭಜಕರು

ಮಠದ ವಿದ್ವಾಂಸ ಗೋಪಾಲ ಆಚಾರ್ಯ ಮಾರ್ಗದರ್ಶನದಲ್ಲಿ ಸಂಗೀತ ವಿದುಷಿ ಉಷಾ ಹೆಬ್ಬಾರ್​ ನೇತೃತ್ವದಲ್ಲಿ ಸಹಸ್ರ ಕಂಠ ಗಾಯನ ನಡೆಯಿತು. 'ಗುರು ಪುರಂದರ ದಾಸರೇ ನಿಮ್ಮ ಚರಣ ಕಮಲವ ನಂಬಿದೆ' ಎಂಬ ಭಜನೆಯೊಂದಿಗೆ ನಾದೋತ್ಸವ ಆರಂಭಗೊಂಡಿತು. ಕಲಾವಿದರಾದ ಮಧುರ್​ ಬಾಲಸುಬ್ರಹ್ಮಣ್ಯಂ, ಭಾರ್ಗವಿ ಮಯ್ಯ, ನಟರಾಜ್​ ಪರ್ಕಳ, ಶರ್ಮಿಳಾ ರಾವ್​, ಬಾಲಚಂದ್ರ ಭಾಗವತ್​, ರಾವೇಂದ್ರ ಆಚಾರ್ಯ, ವಾರಿಜಾ ಎಲ್​. ರಾವ್​ ಇತರರು ಭಕ್ತಿಯ ಲೋಕ ಸೃಷ್ಟಿಸಿದರು. ರವೀಂದ್ರ ಆಚಾರ್ಯ ಪುರಂದರ ದಾಸರಾಗಿ, ನಾಗರಾಜ ತಂತ್ರಿ ಶ್ರೀ ಮಧ್ವಾಚಾರ್ಯರಂತೆ ವೇಷ-ಭೂಷಣ ತೊಟ್ಟು ಸಾವಿರಾರು ಸಂಖ್ಯೆಯಲ್ಲಿದ್ದ ಭಜಕರಿಗೆ ಆಶೀರ್ವದಿಸಿದರು. ಭಜನೆಯೊಂದಿಗೆ ಕೋಲಾಟ, ವಿದುಷಿ ಅದಿತಿ ಅವರಿಂದ ಭರತನಾಟ್ಯ, ಪುಟಾಣಿ ಕೃಷ್ಣನಾಗಿ ನರ್ತಿಸಿದ ಅನುಜ್ಞಾ ಪ್ರಸಾದ್​ ಗಮನ ಸೆಳೆದರು.

ಕಲಿಯುಗದಲ್ಲಿರುವ ನಾವು ಇಂದಿಗೂ ದಾಸ ಸಾಹಿತ್ಯ, ಕೀರ್ತನೆಗಳನ್ನು ಗುರುತಿಸುತ್ತೇವೆ, ಅನುಸರಿಸುತ್ತೇವೆ. ಅನೇಕ ದಾಸವರೇಣ್ಯರು ನಾದೋಪಾಸನೆ ಆರಂಭಿಸಿದರು. ಈದಿನ ಪುರಂದರ ದಾಸರ ಆರಾಧನೆ ನಿಮಿತ್ತ ಹಾಡು, ನರ್ತನದೊಂದಿಗೆ ಶ್ರೀಕೃಷ್ಣನ ಉಪಾಸನಾ ಯಜ್ಞ ಮಾಡಿದ್ದೇವೆ. ನಮ್ಮ ಪರ್ಯಾಯದ ವಿಶೇಷ ಕಾರ್ಯಕ್ರಮವಿದು. | ಸುಗುಣೇಂದ್ರ ಶ್ರೀ. ಪರ್ಯಾಯ ಪುತ್ತಿಗೆ ಮಠ