ಜಿಲ್ಲೆ

ಸಂಘಟನೆಗಳು ಇದ್ದಾಗ ಸಮಾಜಕ್ಕೆ ಒಳಿತು : ಕೃಷಿ ವಿಜ್ಞಾನಿ ಹರೀಶ್ ಶೆಣೈ ಅನಿಸಿಕೆ

ಸೌಮ್ಯ ಆರ್

ಬಂಟ್ವಾಳ: ಮಧುರ ಮನಸ್ಸುಗಳ ಮಿಲನವೇ ಸಹಮಿಲನ. ನಾಗರಿಕ ಕ್ರಿಯಾ ಸಮಿತಿಯ ಮೂಲಕ ಸಂಚಯಗಿರಿ ಅಭಿವೃದ್ಧಿ ಕಾಣುತ್ತಿದೆ, ಇಂತಹ ಸಂಘಟನೆಗಳು ಇದ್ದಾಗ ಸಮಾಜಕ್ಕೆ ಒಳಿತಾಗುತ್ತದೆ ಎಂದು ಕೃಷಿ ವಿಜ್ಞಾನಿ ಹರೀಶ್ ಶೆಣೈ ಹೇಳಿದರು. ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಆಶ್ರಯದಲ್ಲಿ ನಡೆದ 29ನೇ ವರ್ಷದ ಸಹಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಾಧ್ಯಪಕ ಡಾ.ದಾಮೋದರ ಗೌಡ ಮುಖ್ಯ ಅತಿಥಿಯಾಗಿ ಮಾತನಾಡಿ, ಕನಸು, ಗುರಿ, ಸತತ ಪ್ರಯತ್ನ ಇದ್ದಾಗ ಸಾಧನೆ ಮಾಡಲು ಸಾಧ್ಯವಿದೆ. ಕನಸನ್ನು ನನಸು ಮಾಡುವತ್ತ ನಮ್ಮ ಗುರಿಯಿರಬೇಕು. ಅವಕಾಶವನ್ನು ಸದುಪಯೋಗಪಡಿಸಿಕೊಂಡಾಗ ಯಶಸ್ಸು ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು.

ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಸುರೇಶ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಪುರುಷೋತ್ತಮ ಹೆಬ್ಬಾರ್ ಮರಕಡ ಭಾಗವಹಿಸಿದ್ದರು.

ನಾಗರಿಕ ಕ್ರಿಯಾ ಸಮಿತಿ ಗೌರವಾಧ್ಯಕ್ಷ ನರಸಿಂಹ ರಾಜ್ ಹೊಳ್ಳ, ಉಪಾಧ್ಯಕ್ಷೆ ಪ್ರಿಯಾಲತಾ, ಕ್ರೀಡಾ ಕಾರ್ಯದರ್ಶಿ ಪುರಂದರ ಶೆಟ್ಟಿ ಉಪಸ್ಥಿತರಿದ್ದರು. 75ವರ್ಷ ದಾಟಿದ ಹಿರಿಯರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಾಧಕರನ್ನು ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಾರಾಯಣ ನಾಯ್ಕ ದಂಪತಿಯನ್ನು ಗೌರವಿಸಲಾಯಿತು. ಕಾರ್ಯದರ್ಶಿ ಶೇಖರ ಎಂ.ಸ್ವಾಗತಿಸಿದರು, ಉಪನ್ಯಾಸಕಿಯರಾದ ಜ್ಯೋತಿ ಅಕ್ಷತ ಎಂ.ಸನ್ಮಾನಿತರನ್ನು ಪರಿಚಯಿಸಿದರು. ಕೋಶಾಧಿಕಾರಿ ಎ.ದಾಮೋದರ ಸಂಚಯಗಿರಿ ವಂದಿಸಿದರು, ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ, ಸುಧಾಕರ ಸಾಲ್ಯಾನ್ ನಿರೂಪಿಸಿದರು.