ಜಿಲ್ಲೆ

ಸಹಕಾರ ಸಂಘದಿಂದ ಗ್ರಾಮಾಭಿವೃದ್ಧಿ ಸಾಧ್ಯ: ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅಭಿಮತ

reportermys

ಮಂಡ್ಯ: ಗ್ರಾಮಾಭಿವೃದ್ಧಿಗೆ ಸಹಕಾರ ಸಂಘಗಳ ಪಾತ್ರ ಪ್ರಮುಖವಾಗಿದೆ. ಸಂಘಗಳು ಸರಿಯಾದ ನಿಟ್ಟಿನಲ್ಲಿ ನಿರ್ವಹಿಸಿದರೆ ಸರ್ಕಾರದಂತೆಯೇ ಕೆಲಸ ನಿರ್ವಹಣೆ ಮಾಡಬಹುದು ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅಭಿಪ್ರಾಯಪಟ್ಟರು.

ತಾಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ ಹಾಗೂ ಹೆಮ್ಮಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಗುರುವಾರ 69ನೇ ಅಖಿಲ ಭಾರತ ಸಹಕಾರ ಸಪ್ತಾಹ-2022 ಅಂಗವಾಗಿ ಆಯೋಜಿಸಿದ್ದ ಸ್ಟಾರ್ಟ್ ಅಪ್‌ಗಳಿಗೆ ಉತ್ತೇಜನ ಮತ್ತು ತಂತ್ರಜ್ಞಾನದ ಉನ್ನತೀಕರಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಒಂದು ದೊಡ್ಡ ಕನಸು ಕಂಡಿದ್ದರು. ಆದರೆ, ಪೂರ್ಣಪ್ರಮಾಣದ ಸರ್ಕಾರ ಬರಲಿಲ್ಲ. ಕಾಂಗ್ರೆಸ್ ಜತೆ ಮೈತ್ರಿ ಸರ್ಕಾರ ರಚನೆಯಾಯಿತು. ಆ ಸಂದರ್ಭದಲ್ಲಿ ಸಾಲ ಮಾಡಿದಾಗ ಕೆಲವರಿಗೆ ಅನುಕೂಲವಾಗಿದೆ, ಮತ್ತೆ ಕೆಲವರಿಗೆ ಅನಾನುಕೂಲವಾಗಿದೆ. ಕೆಲವರಿಗೆ ಸಾಲ ಮನ್ನಾ ಆಗಿಲ್ಲ. ಈ ಸಂಬಂಧ ಸದನದಲ್ಲಿ ಚರ್ಚೆ ಮಾಡಲು ಜೆಡಿಎಸ್ ಶಾಸಕರು ಸಮಯ ಕೇಳಿದರೂ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಹೂವು, ತರಕಾರಿ ಬೆಳೆ ಹಾಗೂ ತೋಟಗಾರಿಕೆ ಬೆಳೆಗಳು ನೆಲ ಕಚ್ಚಿವೆ. ಇದರಿಂದ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಸಾಲ ಮನ್ನಾ ಯೋಜನೆ ಎಲ್ಲರಿಗೂ ತಲುಪಿದ್ದರೆ, ಸಂಕಷ್ಟದಿಂದ ರೈತರು ಪಾರಾಗುತ್ತಿದ್ದರು. ಸಾಲಮನ್ನಾದಂತಹ ಯೋಜನೆಗಳನ್ನು ಜಾರಿಗೆ ತರಲು ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಎಚ್ಡಿಕೆ ಮುಖ್ಯಮಂತ್ರಿ ಆಗಿದ್ದಾಗ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಯೋಜನೆಯೊಂದಕ್ಕೆ 804 ಕೋಟಿ ರೂ. ಟೆಂಡರ್ ಆಗಿತ್ತು. ಆ ಯೋಜನೆಯನ್ನ ಬಿಜೆಪಿ ತಡೆದರು. ಜಿಲ್ಲೆಯ ಬಗ್ಗೆ ಇವರಿಗೆ ಅಭಿಮಾನವಿದೆಯೇ ಎಂದು ವಾಗ್ದಾಳಿ ನಡೆಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್.ಡಿ.ಕಾಳೇಗೌಡ, ಎಚ್.ಅಶೋಕ್, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಂ.ಕೆ.ಸುಂದರಪ್ಪ, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಉಪಾಧ್ಯಕ್ಷ ರಘುನಂದನ್, ಕೀಲಾರ ಕೃಷ್ಣ, ತಗ್ಗಹಳ್ಳಿ ವೆಂಕಟೇಶ್, ನೆಲ್ಲಿಗೆರೆ ಬಾಲು, ಪೂರ್ಣಿಮಾ, ವಿಕ್ರಮ್ ರಾಜೇ ಅರಸ್, ಎಸ್.ನಾಗೇಂದ್ರ, ಶಿವಕುಮಾರ್ ಇತರರಿದ್ದರು.