ಜಿಲ್ಲೆ

ಜಿಲ್ಲೆಯಲ್ಲಿ ಬಲಿಷ್ಠವಾಗುತ್ತಿರುವ ಸಹಕಾರ ಭಾರತಿ: ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಹೇಳಿಕೆ

reportermys

ಮಂಡ್ಯ: ಜಿಲ್ಲೆಯಲ್ಲಿ ಅನೇಕ ಸಹಕಾರ ಸಂಘ, ಸಹಕಾರಿ ಧುರೀಣರು ಸಹಕಾರಿ ತತ್ವಗಳನ್ನು ಅನುಷ್ಠಾನಗೊಳಿಸಲು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಸಹಕಾರ ಭಾರತಿಯನ್ನು ವಿಸ್ತರಿಸಿ ಗ್ರಾಹಕರಿಗೆ ಉತ್ತಮ ಸೇವೆ ದೊರೆಯುವಂತೆ ಉನ್ನತೀಕರಿಸಲಾಗುತ್ತಿದೆ ಎಂದು ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಹೇಳಿದರು.

ನಗರದ ಗಾಂಧಿಭವನದಲ್ಲಿ ಸಹಕಾರ ಭಾರತಿ ಜಿಲ್ಲಾ ಶಾಖೆಯಿಂದ ಆಯೋಜಿಸಿದ್ದ ಅಭ್ಯಾಸ ವರ್ಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸಹಕಾರ ಭಾರತಿ ಒಂದು ಚಳುವಳಿಯಾಗಿ ರೂಪುಗೊಂಡಿದ್ದು, ಈ ಸಂಸ್ಥೆಯನ್ನು ಜಿಲ್ಲೆಯಾದ್ಯಂತ ಬಲಪಡಿಸಲಾಗುತ್ತಿದೆ. ನಾನು ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಎರಡು ತಿಂಗಳಲ್ಲಿ 800 ಸದಸ್ಯತ್ವ ನೋಂದಣಿ ಮಾಡಿಸಲಾಗಿದೆ. ಪ್ರಸ್ತುತ ಅಭ್ಯಾಸ ವರ್ಗಕ್ಕೆ ಬಂದಿರುವ ಸದಸ್ಯರನ್ನು ಪರಿಗಣಿಸಿದರೆ ಪದಾಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿಲ್ಲ ಎನಿಸುತ್ತದೆ. ಹಾಗಾಗಿ ಜಿಲ್ಲೆಯಲ್ಲಿ ಇನ್ನು ಮುಂದೆ ಸಹಕಾರ ಭಾರತಿಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ನಾನೇ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಹಕಾರ ಭಾರತಿ ರಾಜ್ಯಾಧ್ಯಕ್ಷ ರಾಜಶೇಖರ್ ಶೀಲವಂತ್ ಮಾತನಾಡಿ, ಮಂಡ್ಯದಲ್ಲಿ ನಡೆಯುತ್ತಿರುವ ಸಹಕಾರ ಭಾರತಿಯ ಈ ಅಭ್ಯಾಸ ವರ್ಗದಿಂದ ಜಿಲ್ಲೆಯ ಸಹಕಾರಿಗಳಿಗೆ ಹೊಸ ದಿಕ್ಕನ್ನು ತೋರಿಸುವಂತದ್ದಾಗಿದೆ. 1978ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಜಾರಿಗೆ ತಂದ ಎಮರ್ಜೆನ್ಸಿಯಲ್ಲಿ ಜೈಲು ಸೇರಿದ್ದ ಸಮಾನ ಮನಸ್ಕರು ಸೇರಿ ರೂಪಿಸಿದ್ದೇ ಈ ಚಳವಳಿ. ಲಕ್ಷ್ಮಣ್‌ರಾವ್ ಇನಾಂದಾರ್ ಮತ್ತಿತರರು ಸೇರಿ ಹೊಸದೊಂದು ಯೋಜನೆ ರೂಪಿಸಿ ಅದಕ್ಕೆ ಸಹಕಾರ ಭಾರತಿ ಎಂದು ಹೆಸರಿಟ್ಟರು. ಸಹಕಾರ ಸಂಸ್ಥೆಗಳಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಇಂದು ಇಡೀ ದೇಶದಲ್ಲಿ ಸಹಕಾರ ಭಾರತಿ ಕೆಲಸ ಮಾಡುತ್ತಿದೆ ಎಂದರು.

ವ್ಯಕ್ತಿತ್ವ ವಿಕಸನ ತರಬೇತುದಾರ, ಹರಟೆ ಖ್ಯಾತಿಯ ವೈ.ವಿ.ಗುಂಡೂರಾವ್ ‘ಅಧ್ಯಕ್ಷರು ಮತ್ತು ನಿರ್ದೇಶಕರ ಜವಾಬ್ದಾರಿ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಸತೀಶ್‌ಚಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿಪಾಯಿ ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಎನ್.ನಿತಿನ್‌ಕುಮಾರ್ ಇತರರಿದ್ದರು.