ಜಿಲ್ಲೆ

ಸಹಜರಂಗ ರಂಗ ತರಬೇತಿ ಶಿಬಿರ

ಅವಿನಾಶ್ ಜೈನಹಳ್ಳಿ

ಮೈಸೂರು: ನಿರಂತರ ಫೌಂಡೇಷನ್ ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಸೆ. 20ರಿಂದ ಅಕ್ಟೋಬರ್ 15 ರ ತನಕ ಸಹಜರಂಗ ರಂಗ ತರಬೇತಿ ಶಿಬಿರ ಆಯೋಜಿಸಿದೆ.


ಪ್ರತಿದಿನ ಸಾಯಂಕಾಲ 5 ರಿಂದ 8ರತನಕ ನಡೆಯುತ್ತದೆ. ನಿರಂತರ ಸಂಸ್ಥೆಯು ರಂಗಭೂಮಿ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಪರಿಸರ ಹಾಗೂ ಯುವ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವಾರು ಚಟುವಟಿಕೆಗಳನ್ನು ರೂಪಿಸುತ್ತಿದೆ. ಕಳೆದ ಎರಡು ದಶಕಗಳಿಂದಲೂ ಸ್ಪಷ್ಟ ಉದ್ದೇಶ ಮತ್ತು ಸಾಮಾಜಿಕ ಆಶಯದೊಂದಿಗೆ ಮುನ್ನಡೆಯುತ್ತಿರುವ ಈ ಸಂಸ್ಥೆ, ಕಾಲೇಜು ವಿದ್ಯಾರ್ಥಿಗಳಿಗಾಗಿ ಕಳೆದ 19 ವರ್ಷಗಳಿಂದ ಸಹಜರಂಗ ರಂಗ ತರಬೇತಿ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿದೆ.


ಶಿಬಿರದಲ್ಲಿ ರಂಗಭೂಮಿ ಇತಿಹಾಸ, ರಂಗ ಸಂಗೀತ, ಪರಿಸರ, ನಟನೆ, ಸಮರಕಲೆ ಸೇರಿದಂತೆ ಸಾಹಿತ್ಯ, ಪ್ರಚಲಿತ ವಿದ್ಯಮಾನಗಳ ಬಗ್ಗೆ ತರಗತಿಗಳು ರೂಪುಗೊಂಡಿರುತ್ತವೆ. ನಾಡಿನ ಸಾಹಿತಿಗಳು, ವಿಷಯ ಪರಿಣತರು, ರಂಗ ನಿರ್ದೇಶಕರು, ಸಂಗೀತ ನಿರ್ದೇಶಕರು ತರಗತಿಗಳನ್ನು ತೆಗೆದುಕೊಂಡು ಶಿಬಿರಾರ್ಥಿಗಳೊಂದಿಗೆ ಚರ್ಚೆ ಸಂವಾದಗಳಲ್ಲಿ ಪಾಲ್ಗೊಳ್ಳುತ್ತಾರೆ. ಹಾಗೆಯೆ ಪ್ರಸ್ತುತ ವಿದ್ಯಮಾನಗಳ, ಆಗುಹೋಗುಗಳ ಬಗ್ಗೆ ವಿಸ್ತೃತ ಚರ್ಚೆ ಕೈಗೊಂಡು, ಇದಕ್ಕೆ ಪೂರಕವಾದ ನಾಟಕವನ್ನು ಶಿಬಿರಾರ್ಥಿಗಳಿಂದಲೇ ಮಾಡಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ 9980273167 ಸಂಪರ್ಕಿಸಲು ಕೋರಿದೆ.