ಭಟ್ಕಳ: ಸಮುದ್ರ ಮೂಲಕ ಒಳನುಸುಳಲು ಯತ್ನಿಸುತ್ತಿದ್ದ ಆರು ಭಯೋತ್ಪಾದಕರನ್ನು ಗುರುವಾರ ಬೆಳಗಿನ ಜಾವ 1.30ರ ಸುಮಾರಿಗೆ ಕರಾವಳಿ ಕಾವಲು ಪಡೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಇವರ‌್ಯಾರೂ ನೈಜ ಭಯೋತ್ಪಾದಕರಲ್ಲ. ಕರಾವಳಿ ಕವಚದಿಂದ ನಡೆದ ಕಲ್ಪಿತ ಕಾರ್ಯಾಚರಣೆ ಇದಾಗಿದೆ.
ಪ್ರತಿವರ್ಷ ಭದ್ರತಾ ಪಡೆಗಳ ಸಹಯೋಗದಲ್ಲಿ, ಕರಾವಳಿಯಲ್ಲಿ ನಡೆಯುವ ಸಾಗರ ಕವಚ ಕಲ್ಪಿತ ಕಾರ್ಯಾಚರಣೆಯ ಸನ್ನಿವೇಶಗಳಿವು. ಕರಾವಳಿ ಭಾಗದಲ್ಲಿ ರಕ್ಷಣೆ ಮತ್ತು ಭದ್ರತೆ ಕುರಿತು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮಕೈಗೊಳ್ಳುವ ಬಗ್ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅ. 16 ಮತ್ತು 17ರಂದು ರಕ್ಷಣಾ ವ್ಯವಸ್ಥೆಯ ಕಲ್ಪಿತ ಪ್ರದರ್ಶನ ಸಾಗರ ಕವಚ ವನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಭಾರತೀಯ ನೌಕಾಪಡೆ, ಕೋಸ್ಟ್ ಗಾರ್ಡ್ ಮತ್ತು ರಾಜ್ಯದ ಕರಾವಳಿ ಕಾವಲು ಪಡೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಕರಾವಳಿ ಕಾವಲು ಪೊಲೀಸ್ ಕಟ್ಟೆಚ್ಚರದಿಂದ ತಪಾಸಣೆ ಮಾಡುತ್ತಿದ್ದ ವೇಳೆ ಸಮುದ್ರ ಮಾರ್ಗದಿಂದ ನುಸುಳುತ್ತಿದ್ದ 6 ನಕಲಿ ಭಯೋತ್ಪಾದಕರನ್ನು ಭಟ್ಕಳ ಕರಾವಳಿ ಪೊಲೀಸರು ಗುವರುವಾರ ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕರಾವಳಿ ಪೊಲೀಸ್ ಅಧೀಕ್ಷಕ ಮಿಥುನ್ ಎಚ್.ಎನ್, ಸಿಎಸ್‌ಪಿ ನಿರೀಕ್ಷಕ ಕುಸುಮಾಧರ ಕೆ. ಹಾಗೂ ಸಿಬ್ಬಂದಿ, ಇತರರು ಭಾಗಿಯಾಗಿದ್ದರು. ಮುಂಬೈ ದಾಳಿಯ ಬಳಿಕ ಈ ಅಣಕು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಇದರಲ್ಲಿ ರೆಡ್‌ಫೋರ್ಸ್ ಹಾಗೂ ಬ್ಲೂೃಫೋರ್ಸ್ ಎಂದು ಗುಂಪುಗಳನ್ನು ಮಾಡಲಾಗಿದ್ದು, ರೆಡ್ ಫೋರ್ಸ್‌ನ ನೌಕಾನೆಲೆ ಸಿಬ್ಬಂದಿ ಮಾರುವೇಷದಲ್ಲಿ ಬಂದು ಬಾಂಬ್ ಮಾದರಿಯ ಪೆಟ್ಟಿಗೆಗಳನ್ನು ಆಯ್ದ ಸ್ಥಳಗಳಲ್ಲಿ ಇಡಲಿದ್ದಾರೆ. ಬ್ಲೂೃಫೋರ್ಸ್‌ನ ಪೊಲೀಸ್ ಸಿಬ್ಬಂದಿ ಅದನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಾರೆ