ಜಿಲ್ಲೆ

ವಿಧ್ವಂಸಕ ಕೃತ್ಯಕ್ಕೆ ಸಂಚು, 80 ಜನರ ಬಂಧನ!

ಪ್ರಶಾಂತ ಜಿ. ಭಾಗ್ವತ

ಸಾಗರ್​ ಕವಚ್​ ಅಣಕು ಕಾರ್ಯಾಚರಣೆ

ಕರಾವಳಿ ಕಾವಲು ಪಡೆಯಿಂದ ತಾಲೀಮು

ವಿಜಯವಾಣಿ ಸುದ್ದಿಜಾಲ ಉಡುಪಿ
ಕರಾವಳಿ ಕಡಲತೀರದಲ್ಲಿ ವಿವಿಧ ರೀತಿಯ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಹಾಗೂ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ 80 ಮಂದಿಯನ್ನು ಬಂಧಿಸಲಾಗಿದ್ದು, 6 ಬೋಟ್​, 3 ಬೈಕ್​, ಅಕ್ರಮ ಶಸ್ತ್ರ ಹಾಗೂ ನಕಲಿ ಬಾಂಬ್​ಗಳನ್ನು ಕರಾವಳಿ ಕಾವಲು ಪಡೆಯ ಪೊಲೀಸರು ವಶಕ್ಕೆ ಪಡೆದರು.

ಆದರೆ, ಇದು ನೈಜ ಘಟನೆಯಲ್ಲ. ಉಡುಪಿ ಜಿಲ್ಲೆಯ ಕರಾವಳಿ ಹಾಗೂ ಪ್ರಮುಖ ತಾಣಗಳಲ್ಲಿ ಬುಧವಾರ ಹಾಗೂ ಗುರುವಾರ ನಡೆದ ಸಾಗರ್​ ಕವಚ್​ ಅಣಕು ಕಾರ್ಯಾಚರಣೆಯ ವರದಿಯಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಕಲಿಕೆಯ ತಾಲೀಮು ನಡೆಸಿದರು.

ಮಲ್ಪೆಯ ಆಳ ಸಮುದ್ರದಲ್ಲಿ ಸಂಚರಿಸುತ್ತಿರುವ ಬೋಟ್​ಗಳನ್ನು ಪರಿಶೀಲಿಸಿ, ಅದರಲ್ಲಿದ್ದ ದುಷ್ಕರ್ಮಿ(ನಕಲಿ)ಗಳನ್ನು ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಬಂಧಿಸಿದರು.

ಬಲ ಪರೀಕ್ಷೆ

ಇಂಡಿಯನ್​ ಕೋಸ್ಟ್​ ಗಾರ್ಡ್​ ಆಯೋಜಿಸಿದ್ದ 2ನೇ ವರ್ಷದ ಸಾಗರ್​ ಕವಚ್​ ಅಣಕು ಕಾರ್ಯಾಚರಣೆ ಇದಾಗಿದ್ದು, ರಾಜ್ಯದ ಕಾರವಾರ ಬಂದರಿನಿಂದ ಮಂಗಳೂರು ಬಂದರು ವ್ಯಾಪ್ತಿಯಲ್ಲಿ ಹಾಗೂ ಕರಾವಳಿ ಪ್ರದೇಶಗಳ ರಕ್ಷಣೆಗಾಗಿ ಆಯೋಜಿಸಲಾಗಿತ್ತು. ದುಷ್ಕರ್ಮಿಗಳು ಅಥವಾ ಭಯೋತ್ಪಾದಕರು ಸಮುದ್ರ ಮಾರ್ಗದ ಮೂಲಕ ದೇಶದೊಳಗೆ ನುಸುಳಿ, ವಿಧ್ವಂಸಕ ಕೃತ್ಯ ನಡೆಸಲು ಮುಂದಾದಲ್ಲಿ ಅವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಈಗಿರುವ ವ್ಯವಸ್ಥೆ ಹಾಗೂ ಸೌಕರ್ಯದಲ್ಲಿ ಎಷ್ಟು ಬಲವಿದೆ ಎಂದು ಅರಿತುಕೊಳ್ಳುವ ಹಾಗೂ ಕಲಿಕೆಯ ಚಟುವಟಿಕೆ ಇದಾಗಿದೆ.

ಕೇರಳ ರಾಜ್ಯ ಸಾಥ್​

ಅ.16ರಂದು ನಡೆದ ಕಾರ್ಯಾಚರಣೆಯಲ್ಲಿ ಕೇರಳ ರಾಜ್ಯದ ಕೋಸ್ಟಲ್​ ಗಾರ್ಡ್​ನ ಅಧಿಕಾರಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಗುರುವಾರ(ಅ.17)ವೂ ಸಹ ಕಾರ್ಯಾಚರಣೆ ಮುದುವರಿಯಿತು. ಕರಾವಳಿ ಕಾವಲು ಪಡೆ, ಕಸ್ಟಂ, ಕೋಸ್ಟ್​ ಗಾರ್ಡ್​, ಮೀನುಗಾರಿಕಾ ಇಲಾಖೆ, ಬಂದರು ಇಲಾಖೆಯವರೂ ಪಾಲ್ಗೊಂಡಿದ್ದರು.

ಜಿಲ್ಲೆಯ ಮಲ್ಪೆ ಬಂದರು, ಹೆಜಮಾಡಿ ಲೈಟ್​ ಹೌಸ್​, ಗಂಗೊಳ್ಳಿ ಹಾಗೂ ಉಡುಪಿ ಶ್ರೀಕೃಷ್ಣ ಮಠದ ಪರಿಸರದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಕಾರ್ಯಾಚರಣೆಗೆ ಮೀನುಗಾರರ ಬಳಕೆ

ಸಾಗರ್​ ಕವಚ್​ ಅಣಕು ಕಾರ್ಯಾಚರಣೆಯಲ್ಲಿ ಬಹುಮುಖ್ಯವಾಗಿ ಮೀನುಗಾರರನ್ನು ಬಳಸಿಕೊಳ್ಳಲಾಗಿತ್ತು. ಸಮುದ್ರ ಮಾರ್ಗದ ಮೂಲಕ ಯಾವುದೇ ಅಪರಿಚಿತ ಬೋಟ್​ ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಬಂದಲ್ಲಿ ಕರಾವಳಿ ಕಾವಲು ಪಡೆ ಪೊಲೀಸರಿಗೆ ಪೂರ್ವ ಮಾಹಿತಿ ನೀಡುವವರು ಮೀನುಗಾರರೇ ಆಗಿರುತ್ತಾರೆ. ಹೀಗಾಗಿ ಅವರನ್ನೂ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿತ್ತು. ಮಲ್ಪೆ ಬಂದರಿನತ್ತ ಬಂದ ಬೋಟ್​ಗಳ ಪರಿಶೀಲನೆ, ಅದರಲ್ಲಿರುವವರ ಐಡಿ ಕಾರ್ಡ್​ ತಪಾಸಣೆ ಹಾಗೂ ಬೋಟ್​ಗಳಲ್ಲಿ ಸಶಸ್ತ್ರಗಳು ಇವೆಯೇ ಎಂದು ಪರಿಶೀಲಿಸಲಾಯಿತು. ಇದೇ ವೇಳೆ ಸ್ಥಳೀಯರ ಸಹಭಾಗಿತ್ವದ ಬಗ್ಗೆಯೂ ಮಾಹಿತಿ ನೀಡಲಾಯಿತು.

ಸಾಗರ್​ ಕವಚ್​ ಅಣಕು ಕಾರ್ಯಾಚರಣೆಯು ನಮ್ಮ ಸಾಮರ್ಥ್ಯ ಪರಿಶೀಲಿಸಿಕೊಳ್ಳುವ ವಿಧಾನವಾಗಿದೆ. ಎರಡು ದಿನ ಕಾರ್ಯಾಚರಣೆ ನಡೆಸಿದ್ದೇವೆ. ಬರುವ ನವೆಂಬರ್​ ತಿಂಗಳಲ್ಲಿ ಭಾರತೀಯ ನೌಕಾಪಡೆ ವತಿಯಿಂದ ಇನ್ನೊಂದು ಅಣಕು ಕಾರ್ಯಾಚರಣೆ ಆಯೋಜಿಸಲಾಗಿದೆ. ಪ್ರಸ್ತುತವಾಗಿ ರಾಜ್ಯದ ಕರಾವಳಿ ಕಾವಲು ಪಡೆಯಲ್ಲಿ ಸಾಕಷ್ಟು ಬೋಟ್ಸ್​ಗಳಿವೆ. ಕರಾವಳಿಯ ರಕ್ಷಣೆ ವಿಚಾರ ಬಂದಾಗ ನೇವಿ ಹಾಗೂ ಕೋಸ್ಟ್​ ಗಾರ್ಡ್​ ಸಹ ಇರುವುದರಿಂದ ಹೆಚ್ಚಿನ ಬಲ, ಅಗತ್ಯ ಸೌಕರ್ಯಗಳಿವೆ. | ಮಿಥುನ್​ ಎಚ್​.ಎನ್​.ಕರಾವಳಿ ಕಾವಲು ಪಡೆ ವರಿಷ್ಠ, ಉಡುಪಿ ಜಿಲ್ಲೆ