ನಂಜನಗೂಡು: ತಾಲೂಕಿನ ನಗರ್ಲೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಸೋಲಾರ್ ದೀಪದ ಕಂಬಕ್ಕೆ ಅಳವಡಿಸಿದ್ದ ಶ್ರೀರಾಮಚಂದ್ರನ ಭಾವಚಿತ್ರವಿರುವ ಕೇಸರಿ ಬಾವುಟವನ್ನು ಬುಧವಾರ ಪಿಡಿಒ ಈಶಕುಮಾರ್ ತೆರವುಗೊಳಿಸಿದ್ದಲ್ಲದೆ, ಅದನ್ನು ನೆಲಕ್ಕೆ ಬಿಸಾಡಿದ್ದು, ಇದರಿಂದ ಹಿಂದು ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಿದೆ ಎಂದು ಯುವಕರು ಆರೋಪಿಸಿದ್ದಾರೆ.
ಘಟನೆ ವೇಳೆ ಪಿಡಿಒ ಈಶಕುಮಾರ್ ಹಾಗೂ ಯುವಕರ ನಡುವೆ ವಾಗ್ವಾದವೂ ನಡೆದಿದ್ದು ಪ್ರಕರಣ ಬಿಳಿಗೆರೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಕೊನೆಗೆ ಪೊಲೀಸರು ಉಭಯರನ್ನು ಸಮಾಧಾನಪಡಿಸಿ ವಿವಾದ ಅಂತ್ಯಗೊಳಿಸಿದ್ದಾರೆ.
ಗ್ರಾಮದಲ್ಲಿ ಮೇ 4ರಂದು ಶ್ರೀರಾಮನವಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಾಗಾಗಿ ನಂಜನಗೂಡು-ತಿ.ನರಸೀಪುರ ಮುಖ್ಯ ರಸ್ತೆಯ ರಸ್ತೆ ವಿಭಜಕದಲ್ಲಿರುವ ಸೋಲಾರ್ ವಿದ್ಯುತ್ ಕಂಬಕ್ಕೆ ಶ್ರೀರಾಮಚಂದ್ರನ ಭಾವಚಿತ್ರವಿರುವ ಕೇಸರಿ ಬಾವುಟವನ್ನು ಯುವಕರು ಕಟ್ಟಿದ್ದರು. ಬಾವುಟ ಕಟ್ಟಲು ಅನುಮತಿ ಪಡೆದಿಲ್ಲ, ತೆರವುಗೊಳಿಸುವಂತೆ ಮೌಖಿಕವಾಗಿ ತಿಳಿಸಿದರೂ ತೆಗೆದಿರಲಿಲ್ಲ. ಹಾಗಾಗಿ ಬುಧವಾರ ನಾನೇ ಖುದ್ದು ತೆರವು ಮಾಡಿದ್ದೇನೆ ಎಂದು ಪಿಡಿಒ ಈಶಕುಮಾರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಇದಕ್ಕೆ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದು, ಗ್ರಾಮದಲ್ಲಿ ಈ ರೀತಿಯ ಅನೇಕ ಬಾವುಟಗಳನ್ನು ಅಳವಡಿಸಲಾಗಿದೆ. ಯಾರೂ ಅನುಮತಿ ಪಡೆದಿಲ್ಲ. ಆ ಬಾವುಟ ಇದ್ದಿದ್ದರೆ ಏನೂ ಸಮಸ್ಯೆ ಇರಲಿಲ್ಲ. ಹಿಂದು ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಪಿಡಿಒ ತಾವೇ ಬಾವುಟವನ್ನು ಕಿತ್ತು ನೆಲೆಕ್ಕೆ ಬಿಸಾಡುವ ಮೂಲಕ ಹಿಂದುಗಳನ್ನು ಕೆರಳುವಂತೆ ಮಾಡಿದ್ದಾರೆ. ಇವರಿಗೆ ಕಿಂಚಿತ್ತು ಧಾರ್ಮಿಕ ಸಹಿಷ್ಣುತೆ ಇದ್ದಿದ್ದರೆ ಧಾರ್ಮಿಕ ಭಾವನೆಗಳನ್ನು ಕೆರಳುವಂತೆ ನಡೆದುಕೊಳ್ಳುತ್ತಿರಲಿಲ್ಲ. ಇದರ ಹಿಂದೆ ಏನೋ ಷಡ್ಯಂತ್ರವಿದೆ ಎಂದು ಗ್ರಾಮದ ಯುವಕರು ಆಪಾದಿಸಿದ್ದಾರೆ.
ಇನ್ನು ಪಿಡಿಒ ಈಶಕುಮಾರ್ ಬಾವುಟವನ್ನು ಕಿತ್ತು ನೆಲಕ್ಕೆ ಬಿಸಾಡುವುದನ್ನು ಯುವಕರು ವಿಡಿಯೋ ಚಿತ್ರೀಕರಣ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಪಿಡಿಒ ನಡೆಗೆ ಜಾಲತಾಣದಲ್ಲಿ ವ್ಯಾಪಕ ಖಂಡನೆಯೂ ವ್ಯಕ್ತವಾಗಿದೆ.
ಹನುಮ ಜಯಂತಿ ಆಚರಣೆ ಸಂದರ್ಭದಲ್ಲಿ ನಾವು ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆಯುತ್ತೇವೆಯೇ ಹೊರತು ಬಾವುಟ ಅಳವಡಿಸಲು ಇದುವರೆಗೂ ಯಾರೂ ಅನುಮತಿ ಪಡೆದ ನಿದರ್ಶನವಿಲ್ಲ. ಆದರೆ, ಹಿಂದು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಉದ್ದೇಶದಿಂದಲೇ ಸ್ವತಃ ಪಿಡಿಒ ಅವರೇ ತೆರವುಗೊಳಿಸಲು ಮುಂದಾಗಿ ನೆಲಕ್ಕೆ ಬಿಸಾಡಿ ಉದ್ಧಟತನ ತೋರಿದ್ದಾರೆ. ಕುಡಿಯುವ ನೀರಿನ ಸಮಸ್ಯೆಗಳಿಗೆ ಸ್ಪಂದಿಸದ ಪಿಡಿಒ ಇಂತಹ ಕ್ಷುಲ್ಲಕ ವಿಚಾರಗಳಿಗೆ ಹೆಚ್ಚು ಆಸ್ಪದ ನೀಡಿ ಗ್ರಾಮದಲ್ಲಿ ಅಶಾಂತಿ ಉಂಟು ಮಾಡುತ್ತಿರುವುದು ಸರಿಯಲ್ಲ.
ರಂಗಸ್ವಾಮಿ, ನಗರ್ಲೆ ಗ್ರಾಮಸ್ಥ