ಜಿಲ್ಲೆ

ಅಡುಗೆ ಅನಿಲ ಸಿಲಿಂಡರ್ ಬಳಕೆ, ಇರಲಿ ಸುರಕ್ಷತೆಯ ಎಚ್ಚರಿಕೆ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಅಡುಗೆ ಅನಿಲ ಸಿಲಿಂಡರ್‍ ಬಳಕೆ ಮಾಡುವಾಗ ತಪ್ಪದೆ ಸುರಕ್ಷತೆ ನಿಯಮಗಳನ್ನು ಪಾಲಿಸಬೇಕು ಎಂದು ಐ.ಒ.ಸಿ.ಎಲ್ ಇಂಡಿಯನ್ ಎಲ್. ಪಿ.ಜಿ. ಬೆಂಗಳೂರು ವಿಭಾಗದ ವ್ಯವಸ್ಥಾಪಕ ಭಾರ್ಗವ್ ಹೇಳಿದರು.
ಗೌರಿಬಿದನೂರು ನಗರದ ಎಇಎಸ್ ನ್ಯಾಷನಲ್ ಕಾಲೇಜಿನಲ್ಲಿ ಯುಕ್ತ ಇಂಡಿಯನ್ ಗ್ಯಾಸ್ ಏಜೆನ್ಸಿ ವಿತರಕರಿಂದ  ಏರ್ಪಡಿಸಿದ್ದ ಗ್ಯಾಸ್ ಬಳಕೆ ಜಾಗೃತಿ ಅಭಿಯಾನವನ್ನುದ್ದೇಶಿಸಿ ಮಾತನಾಡಿದರು.
ಅಡುಗೆ ಅನಿಲ ಸಿಲಿಂಡರ್‍ ಸ್ಫೋಟ ಪ್ರಕರಣಗಳು ಹೆಚ್ಚಲು ಗ್ರಾಹಕರಲ್ಲಿನ ಮಾಹಿತಿ‌ ಕೊರತೆ, ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ. ಕಾಲ ಕಾಲಕ್ಕೆ ರೆಗ್ಯುಲೇಟರ್‍, ಪೈಪ್‍ ಸೇರಿದಂತೆ ಪರಿಕರಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ಗ್ಯಾಸ್‍ ಲೀಕ್‍ ಆಗದಂತೆ ನೋಡಿಕೊಳ್ಳಬೇಕು. ಸಿಲಿಂಡರ್ ಗಿಂತಲೂ ಮೇಲ್ಮಟ್ಟದಲ್ಲಿ ಸ್ಟೌವ್‍ ಇರಬೇಕು. ಅಡುಗೆ ಅನಿಲ ಸಿಲಿಂಡರ್‍ ಪೂರೈಕೆ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಅನುಮಾನಗಳಿದ್ದಲ್ಲಿ ಸಂಬಂಧಪಟ್ಟ ಸಿಬ್ಬಂದಿಗೆ ಮಾಹಿತಿ ನೀಡಬೇಕು ಎಂದರು.
ಕಾಲೇಜಿನ ಉಪ ಪ್ರಾಂಶುಪಾಲ  ಟಿ. ಎನ್. ನಂಜುಂಡಪ್ಪ ಮಾತನಾಡಿ, ಸಿಲಿಂಡರ್‍ ನೀಡುವಾಗ  ‍ಸುಸ್ಥಿತಿಯಲ್ಲಿದೆಯೇ ಎಂಬುದನ್ನು ವಿತರಕ ಸ ಪರಿಶೀಲಿಸಬೇಕು. ಗ್ರಾಹಕರು ಗ್ಯಾಸ್ ಬಳಸುವಾಗ ಉದಾಸೀನ ತೋರಬಾರದು. ಬಳಕೆ ಮಾಡದೆ ಇರುವಾಗ ತಪ್ಪದೇ ಸ್ಟೌವ್‍ ಜೊತೆಗೆ ರೆಗ್ಯುಲೇಟರ್‍ ಬಂದ್‍ ಮಾಡಬೇಕು. ಈ ನಿಟ್ಟಿನಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳ ಆಯೋಜನೆಯ ಅಗತ್ಯವಿದೆ  ಎಂದರು.
ವಿತರಕಿ ಕೋಮಲ ಕೃಷ್ಣಾರೆಡ್ಡಿ ಮಾತನಾಡಿ, ಜನ ಹಣ ಉಳಿಕೆ ಉದ್ದೇಶದಿಂದ ಕಾಲ ಕಾಲಕ್ಕೆ ಪೈಪ್‍ ಹಾಗೂ ರೆಗ್ಯುಲೇಟರ್‍ ಬದಲಿಸುವುದಿಲ್ಲ. ಇದು ಅಪಾಯಕ್ಕೆ ದಾರಿ ಮಾಡಿಕೊಡಲಿದೆ. 200-300 ಉಳಿಸಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಳ್ಳಬಾರದು. ಕಾಲ ಕಾಲಕ್ಕೆ ಪರಿಷ್ಕರಿಸಬೇಕು ಎಂದರು.‌ ಗ್ಯಾಸ್ ಬಳಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಪ್ರಶ್ನಿಸಿ,  ಸರಿಯಾದ ಉತ್ತರ ನೀಡಿದವರಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಉಪನ್ಯಾಸಕರದ ವಿಜಯಕುಮಾರ್, ಸರೋಜಮ್ಮ, ಜಗದಾಂಬ, ಸಿಬ್ಬಂದಿ ಗೋಣಿ ಸ್ವಾಮಿ, ಗಿರೀಶ್, ಮಧು, ಸೌಮ್ಯ ಮತ್ತಿತರರು ಇದ್ದರು.