ಕೊಳ್ಳೇಗಾಲ: ಬೆಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ (209) ಸತ್ತೇಗಾಲ-ಚಾಮರಾಜನಗರ ಪುಣಜೂರು ಬೈಪಾಸ್ ಹೆದ್ದಾರಿಗೆ ಅಗತ್ಯವಿರುವ ಹೈಮಾಸ್ಟ್ ಲೈಟ್, ಅಂಡರ್‌ಪಾಸ್ ಇತರ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಭರವಸೆ ನೀಡಿದರು.
ಸತ್ತೇಗಾಲ ಹಾಗೂ ಹ್ಯಾಂಡ್‌ಪೋಸ್ಟ್ ನಡುವಿನ ಹಾದು ಹೋಗಿರುವ ಬೈಪಾಸ್ ರಸ್ತೆಯ ಸೇತುವೆ, ನರೀಪುರ-ಮಧುವನಹಳ್ಳಿ ವೃತ್ತ, ಹೊಸ ಹಂಪಾಪುರ, ಉತ್ತಂಬಳ್ಳಿಯ ಫ್ಲೈಓವರ್‌ಗಳು, ಎನ್‌ಎಚ್‌ಐ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಾತನಾಡಿದರು.
ಸತ್ತೇಗಾಲದಿಂದ ಚಾಮರಾಜನಗರದ 68 ಕಿ.ಮೀ. ಬೈಪಾಸ್ ರಸ್ತೆಯ ಡಿಪಿಆರ್‌ನಲ್ಲಿ ಯಾವ ಕೆಲಸಗಳು ಬಿಟ್ಟು ಹೋಗಿದೆ ಎಂಬುದರ ಬಗ್ಗೆ ಪಟ್ಟಿ ಮಾಡುವ ಉದ್ದೇಶದಿಂದ ಭೇಟಿ ನೀಡಿ ಪರಿಶೀಲಿಸಲಾಗಿದೆ. ನಂತರ ಇಲ್ಲಿ ಅಗತ್ಯವಿರುವ ಎಲ್ಲ ಕೆಲಸವನ್ನು ಡಿಪಿಆರ್‌ಗೆ ಸೇರಿಸಲಾಗುವುದು. ಜನರಿಗೆ ತೊಂದರೆ ಆಗುವ ಯಾವ ಕಾರ್ಯಗಳಾದರೂ ಬಿಟ್ಟು ಹೋಗಿದ್ದಾರೆ. ಆ ಕೆಲಸಕ್ಕೆ ಆದ್ಯತೆ ಮೇಲೆ ಡಿಪಿಆರ್‌ಗೆ ಸೇರಿಸಿ ಕೆಲಸ ನಡೆಸಲಾಗುತ್ತದೆ ಎಂದರು.
ಕಾಮಗಾರಿಯಲ್ಲಿ ಗುಣಮಟ್ಟ ವ್ಯತಾಸ್ಯವಿದ್ದರೆ ಸರಿಪಡಿಸಿಕೊಡಲು ಸೂಚನೆ ನೀಡಲಾಗುತ್ತದೆ. ಅಪಘಾತಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ರಸ್ತೆಯ ಜಂಕ್ಷನ್‌ಗಳಲ್ಲಿ ಹೈಮಾಸ್ಟ್ ಲೈಟ್ಸ್, ರೋಡ್ ಸೇಫ್ಟಿ ಆಡಿಟನ್ನು ಎನ್.ಎಚ್ ಅವರಿಂದ ಮಾಡಿಸಲಾಗುತ್ತದೆ. ಸತ್ತೇಗಾಲ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೂ ಕ್ರಮವಹಿಸಲಾಗುತ್ತದೆ ಎಂದರು.
ಅಂಡರ್ ಪಾಸ್‌ಗೆ ನಿರ್ಮಾಣಕ್ಕೆ ಒತ್ತಾಯ: ಸತ್ತೇಗಾಲ-ಹ್ಯಾಂಡ್‌ಪೋಸ್ಟ್ ನಿರ್ಮಾಣ ನಡುವೆ ಬೈಪಾಸ್‌ಗೆ ಅಂಡರ್ ಪಾಸ್ ಅಗತ್ಯವಿದೆ. ಯಾಕೆಂದರೆ ರಸ್ತೆ ದಾಟುವಾಗ ಆತಂಕದಲ್ಲಿಯೇ ತೆರಳಬೇಕು. ಅಪಘಾತಗಳು ಹೆಚ್ಚಾಗುತ್ತಿದೆ ಎಂದು ಗ್ರಾಮದ ಮುಖಂಡರಾದ ಸಿದ್ದರಾಜು, ಶಿವಶಂಕರ್, ನಂಜುಂಡಮೂರ್ತಿ, ರಾಜಣ್ಣ, ಗೋವಿಂದ ರಾಜು, ಲಿಂಗರಾಜು ಹಾಗೂ ಸತ್ತೇಗಾಲ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸತ್ಯಾದ್ರಿ ಯುವಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಶಿಲ್ಪಾನಾಗ್ ಮನವರಿಕೆ ಮಾಡಿದರು. ನಂತರ ಸ್ಥಳದಲ್ಲಿದ್ದ ಎನ್.ಎಚ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಡಿಪಿಆರ್‌ನಲ್ಲಿ ಅಂಡರ್ ಪಾಸ್ ಸೇರಿಸಲು ಸೂಚನೆ ನೀಡಿದರು.
ಬೈಪಾಸ್ ರಸ್ತೆ ನಿರ್ಮಾಣ ಬಳಿಕ ರಸ್ತೆ ಸಾರಿಗೆ ಬಸ್‌ಗಳು ಗ್ರಾಮದೊಳಗೆ ಬಾರದೆ ಬೈಪಾಸ್‌ನಲ್ಲಿ ಸಂಚಾರ ಮಾಡುತ್ತಿದೆ. ಇದ್ದರಿಂದ ಜನರಿಗೆ ತೊಂದರೆ ಆಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಚನೆ ನೀಡಿ ಗ್ರಾಮದೊಳಗೆ ಬಸ್ ಸಂಚಾರ ಮಾಡುವಂತೆ ಕ್ರಮವಹಿಸಬೇಕೆಂದು ಹೇಳಿದರು.
ಗಮನ ಸೆಳೆದಿದ್ದ ವಿಜಯವಾಣಿ: ಕೆಲ ತಿಂಗಳ ಹಿಂದಷ್ಟೆ ವಿಜಯವಾಣಿ ಪತ್ರಿಕೆ ಸತ್ತೇಗಾಲ-ಹ್ಯಾಂಡ್‌ಪೋಸ್ಟ್ ನಡುವೆ ಹಾದು ಹೋಗಿರುವ ಬೈಪಾಸ್ ರಸ್ತೆಗೆ ಅಂಡರ್ ಪಾಸ್ ನಿರ್ಮಿಸಬೇಕೆಂದು ಸ್ಥಳೀಯ ಗ್ರಾಮಸ್ಥರ ಒತ್ತಾಯವಿರುವ ಬಗ್ಗೆ ಅಂಡರ್‌ಪಾಸ್ ನಿರ್ಮಾಣಕ್ಕೆ ಒತ್ತಾಯ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.