ಹುಮನಾಬಾದ್: ಗ್ರಾಹಕರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವುದು ಎಷ್ಟು ಮುಖ್ಯವೋ, ವಿದ್ಯುತ್ ಅವಘಡಗಳಿಂದ ತಪ್ಪಿಸಿಕೊಳ್ಳಲು ಸುರಕ್ಷತಾ ಕ್ರಮ ವಹಿಸುವುದು ಅಷ್ಟೇ ಅಗತ್ಯವಾಗಿದೆ ಎಂದು ಜೆಸ್ಕಾಂ ಎಂಡಿ ರವೀಂದ್ರ ಕರಿಲಿಂಗಣ್ಣನವರ ಹೇಳಿದರು.
ಮಾಣಿಕನಗರದ ಮಾಣಿಕ ಸೌಧದಲ್ಲಿ ಗುಲ್ಬರ್ಗ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ, ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತಿ ಕೇಂದ್ರ ಮತ್ತು ನಿಗಮ ಕಚೇರಿ ಕಲಬುರಗಿ ಸಹಯೋಗದಲ್ಲಿ ಮಂಗಳವಾರ ಜೆಸ್ಕಾಂ ವಿಭಾಗದ ಸಿಬ್ಬಂದಿಗೆ ಏರ್ಪಡಿಸಿದ್ದ ವಿದ್ಯುತ್ ಸುರಕ್ಷತಾ ಜಾಗೃತಿ ಮೂಡಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ಕಂಪನಿಯ ಪ್ರತಿ ಸಿಬ್ಬಂದಿ ಜವಾಬ್ದಾರಿಯಾಗಿದೆ. ಇದರಲ್ಲಿ ಯಾವುದೇ ರಾಜಿ ಸಹಿಸುವುದಿಲ್ಲ. ಆದರೆ ಜೀವ ಅತ್ಯಂತ ಅಮೂಲ್ಯವಾಗಿದೆ. ಎಷ್ಟೇ ಒತ್ತಡವಿದ್ದರೂ ಸಹ ಕಾರ್ಯನಿರ್ವಿಸುವಾಗ ಕಡ್ಡಾಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಜಾಗೃತಿ ವಹಿಸಬೇಕು. ನಿರ್ಲಕ್ಷ್ಯ ವಹಿಸುವುದರಿಂದ ಜೀವಹಾನಿ ಸೇರಿ ಸಾಕಷ್ಟು ತೊಂದರೆಯಾಗಲಿವೆ. ಈ ನಿಟ್ಟಿನಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಜೆಸ್ಕಾಂ ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತಿ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಆಶೆಪ್ಪ, ಹುಮನಾಬಾದ್ ವಿಭಾಗದ ಇಇ ಶಂಕರ ಅಡಕಿ, ವಿದ್ಯುತ್ ಪರಿವೀಕ್ಷಕರಾದ ಶಿಲ್ಪಾರಾಣಿ, ಅರವಿಂದ, ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ರೋಹಿತ ರಘೋಜಿ, ಅಗ್ನಿ ಶಾಮಕ ಠಾಣೆ ಅಧಿಕಾರಿ ಶಾಂತಕುಮಾರ ಹಂದಿಗೋಳ, ಪಂಡರಿನಾಥ ಮಾತನಾಡಿ, ನಿರ್ವಹಣಾ ಸಿಬ್ಬಂದಿಗೆ ವಿದ್ಯುತ್ ಸುರಕ್ಷತೆಯ ಕುರಿತು ಮಾಹಿತಿ ನೀಡಿದರು.
ಜೆಸ್ಕಾಂ ಇಇಗಳಾದ ಶಿವಶಂಕರ ಬಪ್ಪಣ್ಣಿ, ಸಚಿನ್ ಹುಂಡೇಕರ, ಎಇಇಗಳಾದ ರಮೇಶ ಮೈನಳ್ಳೆ, ಗಣಪತಿ ಮೈನಳ್ಳಿ, ಸೂರ್ಯಕಾಂತ ಪಾಟೀಲ್, ರಾಹುಲ್ ಇಜಾರೆ, ಬಾಬುರಾವ ನಿನ್ನೆಕರ್ ಹಾಗೂ ಅಧಿಕಾರಿ, ಸಿಬ್ಬಂದಿ ಇದ್ದರು. ಎಇಇ ಗುರುಶಾಂತ ವಾರದ ಸ್ವಾಗತಿಸಿ ನಿರೂಪಣೆ ಮಾಡಿದರು.