ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರು ಇಲ್ಲಿನ ಗದಗ ರಸ್ತೆಯ ರೈಲ್ ಸೌಧದಲ್ಲಿ ಶುಕ್ರವಾರದಂದು ವಿವಿಧ ಇಲಾಖೆಗಳ ಪ್ರಧಾನ ಮುಖ್ಯಸ್ಥರೊಂದಿಗೆ ಸುರಕ್ಷತಾ ಸಭೆ ನಡೆಸಿದರು.
ರೈಲ್ವೆ ಸುರಕ್ಷತೆ ಹೆಚ್ಚಿಸುವ ನಿರ್ಣಾಯಕ ಚರ್ಚೆಯ ನಂತರ ಅರವಿಂದ ಶ್ರೀವಾಸ್ತವ ಅವರು 10 ಉದ್ಯೋಗಿಗಳಿಗೆ ಸುರಕ್ಷತಾ ಪ್ರಶಸ್ತಿ ನೀಡಿ, ಸನ್ಮಾನಿಸಿದರು.
ಹುಬ್ಬಳ್ಳಿ ವಿಭಾಗದಿಂದ ಮೂವರು ಉದ್ಯೋಗಿಗಳಿಗೆ, ಬೆಂಗಳೂರು ವಿಭಾಗದಿಂದ ಇಬ್ಬರು ಮತ್ತು ಮೈಸೂರು ವಿಭಾಗದಿಂದ ಐವರು ಉದ್ಯೋಗಿಗಳಿಗೆ ಪ್ರಶಸ್ತಿ ನೀಡಲಾಯಿತು.
ಕರ್ತವ್ಯದ ಸಮಯದಲ್ಲಿ ಅವರ ಜಾಗರೂಕತೆ, ಅಹಿತಕರ ಘಟನೆಗಳನ್ನು ತಪ್ಪಿಸುವಲ್ಲಿ ಮತ್ತು ರೈಲು ಕಾರ್ಯಾಚರಣೆೆಯಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಉದ್ಯೋಗಿಗಳ ಕೊಡುಗೆ ಶ್ಲಾಘಿಸಿ, ಪ್ರಶಸ್ತಿಗಳನ್ನು ನೀಡಲಾಯಿತು.
ಹುಬ್ಬಳ್ಳಿ ವಿಭಾಗದ ಮಂಥಾ ಜಗನ್ನಾಥ ರಾವ್, ವಿಶ್ವೇಶ್ವರ ಆನಂದ, ತಾರಾಚಂದ ಝಾಟ್,
ಬೆಂಗಳೂರು ವಿಭಾಗದ ಮಂಜುನಾಥನ್, ಬಿ.ರಾಮಾಂಜಿಯನೇಯಲು, ಮೈಸೂರು ವಿಭಾಗದ ಹರೀಶ, ಆನಂದ, ಶ್ರೀಧರ ಡಿ.ಆರ್, ತಿಪ್ಪೇಶಪ್ಪ ಮತ್ತು ರವಿಕುಮಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅರವಿಂದ ಶ್ರೀವಾಸ್ತವ ಅವರು ಸುರಕ್ಷತೆಗಾಗಿ ಉದ್ಯೋಗಿಗಳ ತ್ವರಿತ ಚಿಂತನೆ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದರು.
ಸುರಕ್ಷತೆ ಮೊದಲು ಮತ್ತು ಸುರಕ್ಷತೆ ಯಾವಾಗಲೂ ಎಂಬುದು ನೈಋತ್ಯ ರೈಲ್ವೆಯ ಉನ್ನತ ಆದ್ಯತೆಯಾಗಿದೆ ಎಂದು ಪುನರುಚ್ಚರಿಸಿದರು.