ಬೆಂಗಳೂರು: ಮೂಲಸೌಕರ್ಯ ಅಭಿವೃದ್ಧಿ, ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿ ಹಾಗೂ ಸಾರ್ವಜನಿಕ ಜಾಗೃತಿಯಿಂದ ಮಾತ್ರ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆ ಮಾಡಬಹುದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಮಂಗಳವಾರ ನಡೆದ ಎಸ್ಎಎಫ್ಇ ವಾರ್ಷಿಕ ಸಮಾವೇಶ 'ರಸ್ತೆ ಸುರಕ್ಷತೆಗಾಗಿ ಒಕ್ಕೂಟದ ಪ್ರಯತ್ನಗಳು: ನಮ್ಮ ರಸ್ತೆಗಳು, ನಮ್ಮ ಜವಾಬ್ದಾರಿ' ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದಲ್ಲಿ ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕವು ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ ಗಣನೀಯ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ರಸ್ತೆ ನಿರ್ಮಾಣ ಹಾಗೂ ವಿಸ್ತರಣೆಗೆ ಹಲವು ಯೋಜನೆಗಳನ್ನು ಕೈಗೊಂಡಿದ್ದೇವೆ ಎಂದರು.
ಅತಿವೇಗ, ಅಜಾಗರೂಕ ಚಾಲನೆ, ಕುಡಿದು ವಾಹನ ಚಾಲನೆಯಂತಹ ಸಂಚಾರ ನಿಯಮಗಳ ಉಲ್ಲಂನೆ ನಿಯಂತ್ರಿಸಲು ಎಐ ತಂತ್ರಜ್ಞಾನ ಸಹಾಯಕವಾಗಿದೆ. ಈ ನಿಟ್ಟಿನಲ್ಲಿ ರಸ್ತೆ ಸುರಕ್ಷತೆ ಹೆಚ್ಚಿಸಲು ಸುಧಾರಿತ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ ಎಂದ ಸಿಎಂ, ದೇಶದಲ್ಲೇ ಅತಿದೊಡ್ಡ ಎಲೆಕ್ಟ್ರಿಕ್ ಬಸ್ ಖರೀದಿ ಯೋಜನೆ ಆರಂಭಿಸಿದ್ದೇವೆ. ಇದರ ಭಾಗವಾಗಿ ಮುಂದಿನ ಎರಡು ವರ್ಷಗಳಲ್ಲಿ 5 ಸಾವಿರ ಎಲೆಕ್ಟ್ರಿಕ್ ಬಸ್ ಖರೀದಿಸಲಿದ್ದೇವೆ. ಇದರಿಂದ ಪರಿಸರದಲ್ಲಿ ಮಾಲಿನ್ಯ ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್ಐಎಂ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಪ್ರಶಾಂತ್ ಬ್ಯಾನರ್ಜಿ, ಟಾಟಾ ಮೋಟಾರ್ಸ್ ಲಿ. ಸಾರ್ವಜನಿಕ ವ್ಯವಹಾರಗಳ ಮುಖ್ಯಸ್ಥ ಸುಶಾಂತ್ ನಾಯಕ್, ಮಾರುತಿ ಸುಜುಕಿ ಇಂಡಿಯಾದ ಸ್ೇ ಮತ್ತು ಇವಿಪಿ ಉಪಾಧ್ಯಕ್ಷ ಅಲೋಕ್ ಜೇಟ್ಲಿ, ಟೊಯೊಟಾ ಕಿಲೋರ್ಸ್ಕರ್ ಮೋಟಾರ್ನ ನವೀನ್ ಸೋನಿ, ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ. ಎನ್.ವಿ.ಪ್ರಸಾದ್ ಇತರರಿದ್ದರು.
ಎಸ್ಐಎಎಂ ಮತ್ತು ಸಾರಿಗೆ ಇಲಾಖೆ ಸಹಯೋಗದಲ್ಲಿ ರಸ್ತೆ ಸುರಕ್ಷತೆ ಶಿಕ್ಷಣ ಘೋಷಣೆ ಸ್ಪರ್ಧೆ ಹಾಗೂ ಐಷರ್ ೌಂಡೇಷನ್ ಮತ್ತು ಬಿಎಂಟಿಸಿ ಸಹಯೋಗದಲ್ಲಿ 15 ಸಾವಿರ ಬಿಎಂಟಿಸಿ ಚಾಲಕರಿಗೆ ಉಚಿತ ನೇತ್ರ ತಪಾಸಣೆ, ಹೆಲ್ಮೆಟ್ ಜಾಗೃತಿ ಸೇರಿ ಹಲವು ಉಪಕ್ರಮಗಳಿಗೆ ಸಿದ್ದರಾಮಯ್ಯ ಚಾಲನೆ ನೀಡಿದರು. ರಸ್ತೆ ಸುರಕ್ಷತೆಗಳನ್ನು ಉತ್ತೇಜಿಸಲು ಅತ್ಯುತ್ತಮ ಕೊಡುಗೆ ನೀಡಿದ ಕೆಎಸ್ಆರ್ಟಿಸಿ, ಬಿಎಂಟಿಸಿ, ಶಿಕ್ಷಣ ಇಲಾಖೆ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ 10 ಜನರನ್ನು ಸನ್ಮಾನಿಸಲಾಯಿತು.
ಸುಮಾರು 3 ಕೋಟಿ ವಾಹನಗಳನ್ನು ಹೊಂದಿರುವ ಕರ್ನಾಟಕದಲ್ಲಿ ರಸ್ತೆ ಸುರಕ್ಷತೆ ಸುಧಾರಿಸಲು ಎಐ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ತಾಂತ್ರಿಕ ಪ್ರಗತಿ ಸಾಧಿಸಲು ಸರ್ಕಾರ ನಿರ್ಧರಿಸಿದೆ. ಮುಖ್ಯವಾಗಿ ಬೆಂಗಳೂರಿನಲ್ಲಿ ವಾಹನದಟ್ಟಣೆ ಹೆಚ್ಚುತ್ತಿದ್ದು, ಸಂಚಾರದಟ್ಟಣೆ ನಿಯಂತ್ರಣ ಹಾಗೂ ರಸ್ತೆ ಸುರಕ್ಷತೆ ಹೆಚ್ಚಿಸಲು ಹಲವು ಉಪಕ್ರಮಗಳನ್ನು ಜಾರಿಗೊಳಿಸಲಾಗುವುದು.
> ಡಿ.ಕೆ.ಶಿವಕುಮಾರ್, ಡಿಸಿಎಂ
ಸಾರಿಗೆ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆ. ಭವಿಷ್ಯದ ಅಗತ್ಯಗಳನ್ನು ಪೂರೈಸುವ ಮಾದರಿಯಲ್ಲಿ ದೇಶದಲ್ಲಿ ವಾಹನಗಳು ಉತ್ಪಾದನೆಯಾಗುತ್ತಿವೆ. ಜಲ ಸಾರಿಗೆ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಒಟ್ಟಾರೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಾರ್ವಜನಿಕ ಸಾರಿಗೆಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ.
> ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ