ಜಿಲ್ಲೆ

ಸಫಾರಿ ಸಮಯ, ಶುಲ್ಕ ಪರಿಷ್ಕರಣೆ

ಆರ್.ಕೃಷ್ಣ

ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ಸಮಯ ಮತ್ತು ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಜೂ.1ರಿಂದ ಜಾರಿಗೆ ಬಂದಿದೆ.

ಎಚ್.ಡಿ. ಕೋಟೆ ತಾಲೂಕು ಅಂತರಸಂತೆ ವಲಯದ ಕಾಕನಕೋಟೆ (ದಮ್ಮನಕಟ್ಟೆ), ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಮತ್ತು ಕೊಡಗಿನ ನಾಣಚ್ಚಿ ಗೇಟ್ ಬಳಿ ಮೂರು ಕೇಂದ್ರಗಳಿಂದ ಪ್ರತಿದಿನ ಸಫಾರಿಗೆ ಕರೆದೊಯ್ಯಲಾಗುತ್ತಿದೆ. ಕಬಿನಿ ಹಿನ್ನೀರು ವ್ಯಾಪ್ತಿಯ ಕಾಕನಕೋಟೆ ಸಫಾರಿ ಕೇಂದ್ರದಿಂದ ಸಫಾರಿಗೆ ಹೋಗುವವರ ಸಂಖ್ಯೆ ಹೆಚ್ಚುತ್ತಿದ್ದುದ್ದರಿಂದ ಕೆಲವರಿಗೆ ಟಿಕೆಟ್ ಸಿಗುತ್ತಿರಲಿಲ್ಲ ಎಂಬ ಕಾರಣಕ್ಕೆ ಸಮಯ ಪರಿಷ್ಕರಿಸಲಾಗಿದೆ. ಅರಣ್ಯ ಇಲಾಖೆಯ ಈ ಕ್ರಮದಿಂದ ಹೆಚ್ಚಿನ ಪ್ರವಾಸಿಗರಿಗೆ ಸಫಾರಿಗೆ ತೆರಳಲು ಅವಕಾಶ ದೊರೆತಂತಾಗುತ್ತದೆ. ಕಾಕನಕೋಟೆ ಸಫಾರಿ ಕೇಂದ್ರದಿಂದ ಇದುವರೆಗೆ ಬಸ್‌ನಲ್ಲಿ 3 ಗಂಟೆಯ ಅವಧಿಯ ಸಫಾರಿಗೆ ವಯಸ್ಕರಿಗೆ 865 ರೂ., ಮಕ್ಕಳಿಗೆ 430 ರೂ. ಜೀಪ್‌ನಲ್ಲಿ ಹೋಗುವರಿಗೆ ಒಬ್ಬರಿಗೆ 855 ರೂ. ನಿಗದಿಪಡಿಸಲಾಗಿತ್ತು.

ಈಗ ಹೊಸ ವೇಳಾಪಟ್ಟಿಯಂತೆ 3 ಗಂಟೆ ಸಫಾರಿ ಅವಧಿಯನ್ನು 2 ಗಂಟೆಗೆ ಇಳಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ತಲಾ 2 ಗಂಟೆ ಅವಧಿಯ ಸಫಾರಿ ಇರಲಿದ್ದು, ಬೆಳಗ್ಗೆ 6ರಿಂ ದ 8, 8.15ರಿಂದ 10.15, ಮಧ್ಯಾಹ್ನ 2.15ರಿಂದ 4.15, ಸಂಜೆ 4.30ರಿಂದ 6.30ರವರೆಗೆ ಸಫಾರಿ ವಾಹನ ತೆರಳುತ್ತದೆ. ಬಸ್‌ನಲ್ಲಿ 2 ಗಂಟೆಯ ಸಫಾರಿಗೆ 600 ರೂ., ಮಕ್ಕಳಿಗೆ 300 ರೂ. ನಿಗದಿಪಡಿಸಲಾಗಿದೆ. ಜೀಪ್‌ನಲ್ಲಿ ತೆರಳುವವರಿಗೆ ತಲಾ ಒಂದು ಸಾವಿರ ರೂ. ನಿಗದಿಪಡಿಸಲಾಗಿದೆ.

ವೀರನಹೊಸಹಳ್ಳಿ ಗೇಟ್‌ನಿಂದ ನಿತ್ಯ ಬೆಳಗ್ಗೆ 6.15ರಿಂ ದ 9.45ರವರೆಗೆ, ಮಧ್ಯಾಹ್ನ 3ರಿಂ ದ 6.30ರವರೆಗೆ ಸಫಾರಿಗೆ ಸಮಯ ನಿಗದಿಪಡಿಸಲಾಗಿದೆ. ಕೊಡಗು ಜಿಲ್ಲೆಯ ಕುಟ್ಟ ಸಮೀಪದ ನಾಣಚ್ಚಿ ಗೇಟ್ ಕೇಂದ್ರದಿಂದ ನಿತ್ಯ ಬೆಳಗ್ಗೆ 6 ರಿಂದ 8, ಬೆಳಗ್ಗೆ 8.15ರಿಂದ 10.15ರವರೆಗೆ, ಮಧ್ಯಾಹ್ನ 2.15ರಿಂ ದ 4.15ರವರೆಗೆ, 4.30ರಿಂ ದ 6.30ರವರೆಗೆ ತಲಾ 2 ಗಂಟೆ ಅವಧಿಯ ಸಫಾರಿ ಇರಲಿದೆ,

ಕ್ಯಾಮರಾ ದರ ಪರಿಷ್ಕರಣೆ

ಸಫಾರಿ ವೇಳೆ ಪ್ರವಾಸಿಗರು ಒಯ್ಯುವ ಕ್ಯಾಮರಾ ಶುಲ್ಕವನ್ನೂ ಪರಿಷ್ಕರಿಸಲಾಗಿದೆ. ಲೆನ್ಸ್ ಇಲ್ಲದ ಡಿಎಸ್‌ಎಲ್ಆರ್ ಕ್ಯಾಮರಾಗೆ ಶುಲ್ಕವಿಲ್ಲ. 200 ಎಂಎಂನಿಂದ 500 ಎಂಎಂ ಲೆನ್ಸ್ ಹೊಂದಿದ್ದರೆ ಒಂದು ಸಾವಿರ+ ಜಿಎಸ್‌ಟಿ, 500 ಎಂಎಂಗಿಂತ ಹೆಚ್ಚಿನ ಸಾಮರ್ಥ್ಯದ ಲೆನ್ಸ್ ಇದ್ದರೆ 1,500+ ಶೇ .18ರಷ್ಟು ಜಿಎಸ್‌ಟಿ ಪಾವತಿಸಬೇಕು. ಈ ಹಿಂದೆ ಲೆನ್ಸ್ ಇಲ್ಲದ ಕ್ಯಾಮರಾಗೂ ಶುಲ್ಕ ಪಾವತಿಸಬೇಕಾಗಿತ್ತು. ಆದರೆ ಈಗ ಅದಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.