ಕನಕಗಿರಿ: ಕುಡಿವ ನೀರಿಗೆ ತತ್ವಾರ ಇರುವ ತಾಲೂಕಿನ ನಾನಾ ಗ್ರಾಮಗಳಿಗೆ ತಾಪಂ ಇಒ ರಾಜಶೇಖರ, ಗ್ರಾಮೀಣ ಕುಡಿವ ನೀರು ನೈರ್ಮಲ್ಯ ವಿಭಾಗದ ಜೆಇ ರಾಜಕಿಶೋರ ತಂಡ ಶನಿವಾರ ಭೇಟಿ ನಿಡಿತು.
ಕುಡಿವ ನೀರಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಗೆ ವಿವಿಧ ಗ್ರಾಮಸ್ಥರು ಆಗ್ರಹಿಸುತ್ತಿದ್ದ ಹಿನ್ನೆಲೆಯಲ್ಲಿ ಸಚಿವರ ಆಪ್ತ ಸಹಾಯಕ ವೆಂಕಟೇಶ ಜತೆಗೆ ತಾಪಂ ಇಒ ರಾಜಶೇಖರ, ಜೆಇ ರಾಜಕಿಶೋರ ಅವರು, ಅಡವಿಬಾವಿ, ಕನ್ನೇರಮಡು, ಬಸರಿಹಾಳ, ಹಳೇ ಬೊಮ್ಮಸಾಗರ ಗ್ರಾಮಗಳಿಗೆ ತೆರಳಿ ಸಾರ್ವಜನಿಕರ ಸಮಸ್ಯೆ ಆಲಿಸಿದರು.
ಅಡವಿಬಾವಿ ಗ್ರಾಮದಲ್ಲಿ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಒದಗಿಸಲು ಪಿಡಿಒ ಹನುಮಂತಪ್ಪಗೆ ತಾಪಂ ಇಒ ಸೂಚಿಸಿ, ಈಗಾಗಲೇ ಕೊರೆಯಿಸಲಾಗಿರುವ ಬೋರ್‌ವೆಲ್‌ನಿಂದ ಪೈಪ್‌ಲೈನ್ ಮಾಡಲಾಗುತ್ತಿದ್ದು, ಅಪೂರ್ಣಗೊಂಡಿರುವ ಕೆಲಸ ಪೂರ್ಣಗೊಳಿಸಿ ಕನ್ನೇರಮಡು ಗ್ರಾಮದಲ್ಲಿ ನೀರಿನ ತೊಂದರೆಯಾಗದಂತೆ ಗ್ರಾಮಿಣ ಕುಡಿವ ನೀರು ಇಲಾಖೆ ಕ್ರಮ ವಹಿಸಬೇಕು. ಬಸರಿಹಾಳ ಹಾಗೂ ಹಳೇ ಬೊಮ್ಮಸಾಗರ ಗ್ರಾಮಗಳಲ್ಲಿ ಬೋರ್‌ವೆಲ್ ಕೊರೆಯಿಸಿ, ನೀರು ಪೂರೈಸಿ ಎಂದು ಜೆಇ ರಾಜಕಿಶೋರಗೆ ತಿಳಿಸಿದರು.