ಜಿಲ್ಲೆ

ಸಾದ್ವಿ ವಿರುದ್ಧ ಟ್ವೀಟ್ ಮಾಡಿದ್ದ ವ್ಯಕ್ತಿಗೆ ನೋಟಿಸ್

ಶಿವಮೊಗ್ಗ: ಪ್ರಚೋದನಕಾರಿ ಭಾಷಣ ಮಾಡಿರುವ ಭೋಪಾಲ್ ಲೋಕಸಭಾ ಸದಸ್ಯೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಎಫ್‌ಐಆರ್ ಹಾಕಬೇಕು ಎಂದು ಟ್ವೀಟ್ ಮಾಡಿದ್ದ ಪುಣೆ ಮೂಲದ ತೆಹಸೀನ್ ಪೂನಾವಾಲಾ ಎಂಬುವರಿಗೆ ಖುದ್ದು ಠಾಣೆಗೆ ಹಾಜರಾಗುವಂತೆ ಶಿವಮೊಗ್ಗ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಶಿವಮೊಗ್ಗದ ಎನ್‌ಇಎಸ್ ಮೈದಾನದಲ್ಲಿ ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣದಿಂದ ಆಯೋಜಿಸಿದ್ದ ತ್ರೈ ವಾರ್ಷಿಕ ಪ್ರಾಂತ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದ್ದ ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್, ತರಕಾರಿ ಕತ್ತರಿಸಲು ಬಳಸುವ ಚಾಕುವನ್ನು ಪ್ರಾಣ ರಕ್ಷಣೆಗೂ ಬಳಕೆ ಮಾಡುವುದನ್ನು ಕಲಿಯಬೇಕು ಎಂದು ಕರೆ ನೀಡಿದ್ದರು. ಇಂಥ ಹೇಳಿಕೆ ಮೂಲಕ ಸಾದ್ವಿ ಪ್ರಜ್ಞಾ ಸಿಂಗ್ ಸಾಮಾಜಿಕ ಸ್ವಾಸ್ಥ್ಯಕ್ಕೆ ಭಂಗ ತರುತ್ತಿದ್ದಾರೆ ಎಂದು ತೆಹಸೀನ್ ಪೂನಾವಾಲಾ ಟ್ವಿಟರ್‌ನಲ್ಲಿ ಕಿಡಿಕಾರಿದ್ದರು. ಅಲ್ಲದೆ, 153-ಅ, 153-ಆ, 268, 295-ಅ, 298, 504, 508 ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಶಿವಮೊಗ್ಗ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗಂಭೀರವಾಗಿ ಪರಿಗಣಿಸಿದ ಕೋಟೆ ಠಾಣೆ ಪೊಲೀಸರು, ಠಾಣೆಗೆ ಹಾಜರಾಗುವಂತೆ ತೆಹಸೀನ್ ಪೂನಾವಾಲಾ ಅವರಿಗೆ ಮೇಲ್ ಮಾಡಿದ್ದಾರೆ.

ಅಸಮಾಧಾನ: ಶಿವಮೊಗ್ಗ ಕೋಟೆ ಪೊಲೀಸರು ಬೆದರಿಕೆ ಕ್ರಮ ಅನುಸರಿಸುತ್ತಿದ್ದಾರೆ ಎಂದು ಉದ್ಯಮಿ ತೆಹಸೀನ್ ಪೂನಾವಾಲಾ ಮತ್ತೊಂದು ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳವಾರ ರಾತ್ರಿ 8ಕ್ಕೆ ಇ-ಮೇಲ್ ಮೂಲಕ ನೋಟಿಸ್ ನೀಡಿ ಬುಧವಾರ ಬೆಳಗ್ಗೆ 11ರೊಳಗೆ ಠಾಣೆಯಲ್ಲಿರಲು ಸೂಚಿಸಿದ್ದಾರೆ. ಈ ಮೂಲಕ ಪೊಲೀಸರು ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿ ಟ್ವೀಟ್ ಮಾಡಿದ್ದಾರೆ.