ಚಿತ್ರದುರ್ಗ: ನ್ಯಾ. ಸದಾಶಿವ ಆಯೋಗದ ವರದಿ ಯಥಾವತ್ತು ಜಾರಿಗೊಳಿಸಬೇಕು. ಸಂಕ್ರಾಂತಿಯೊಳಗೆ ಮಾದಿಗ ಸಮುದಾಯಕ್ಕೆ ಸಿಹಿ ಸುದ್ದಿ ನೀಡದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಐಮಂಗಲದ ಹರಳಯ್ಯ ಗುರುಪೀಠದ ಹರಳಯ್ಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಜ. 30 ರವರೆಗೂ ಗಡುವು ಕೇಳಿದ್ದಾರೆ. ಅವರಿಗೆ ಸರ್ಕಾರದ ಮೇಲೆ ವಿಶ್ವಾಸ ಇರಬಹುದು. ನಮಗಿಲ್ಲ. 30 ವರ್ಷದಲ್ಲಿ ಯಾವ ಸಿಎಂ ಕೂಡ ಸಮುದಾಯದವರ ಮನವಿ ಕೂಡ ಪಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಳಮೀಸಲಾತಿ ವರ್ಗೀಕರಣ ವಿಚಾರವಾಗಿ ಸತತ 3 ದಶಕಗಳಿಂದ ಸೈಕಲ್ ಜಾಥಾ, ಪಾದಯಾತ್ರೆ, ಅರೆಬೆತ್ತಲೆ ಮತ್ತು ತಮಟೆ ಮೆರವಣಿಗೆ, ಸಿಎಂ ೇರಾವ್, ಕಚೇರಿಗಳಿಗೆ ಮುತ್ತಿಗೆ ಹೀಗೆ ವಿವಿಧ ರೀತಿಯಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಆದರೆ, ಸರ್ಕಾರಗಳು ಗಂಭೀರವಾಗಿ ಪರಿಗಣಿಸಿಲ್ಲ. ಚುನಾವಣೆ ಘೋಷಣೆಯಾದರೆ ವರದಿ ಜಾರಿ ನನೆಗುದಿಗೆ ಬೀಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಮನವೊಲಿಸುವ ಯತ್ನ ಮಾಡುವುದು, ಪ್ರಣಾಳಿಕೆಯಲ್ಲಿ ಪ್ರಕಟಿಸುವುದು ಸಾಮಾನ್ಯ. ಆದರೆ, ಜೆಡಿಎಸ್, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಲಿಲ್ಲ. ಬಿಜೆಪಿ ಮಾಡುತ್ತದೆ ಎಂಬ ವಿಶ್ವಾಸವಿಲ್ಲ. ವರದಿ ಜಾರಿ ಆಗುತ್ತೋ, ಇಲ್ಲವೋ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲಿ. ನಮ್ಮ ಮುಂದಿನ ಹೆಜ್ಜೆಯನ್ನು ನಿರ್ಧರಿಸಲು ಸಹಕಾರಿಯಾಗಲಿದೆ ಎಂದು ಕುಟುಕಿದರು.
ಸದಾಶಿವ ಆಯೋಗದ ವರದಿ ಸರಿ ಇಲ್ಲವೆಂದು ಭೋವಿ, ಲಂಬಾಣಿ ಸಮುದಾಯ ಹೇಳುತ್ತಿದೆ. ಸರ್ಕಾರಕ್ಕೆ ಸಲ್ಲಿಕೆಯಾದ ವರದಿ ಇವರ ಕೈಗೆ ಕೊಟ್ಟವರ‌್ಯಾರು? ಮಾದಿಗ ಸಮುದಾಯದ ಪರವಾಗಿ ವರದಿ ಪಡೆಯಲು ನಾವೇನೂ ಸರ್ಕಾರಕ್ಕೆ ದುಡ್ಡು ಕೊಟ್ಟು ಆಯೋಗ ರಚಿಸಲು ಹೇಳಿಲ್ಲ. ಸರ್ಕಾರವೇ ರಚಿಸಿದ ಆಯೋಗ. ಅದನ್ನು ಜಾರಿಗೆ ತರಲು ಒತ್ತಾಯಿಸುತ್ತಿದ್ದೇವೆ. ಆದರೆ, ಇದರಲ್ಲೂ ರಾಜಕೀಯ ಹುನ್ನಾರಕ್ಕೆ ಮುಂದಾದಂತಿದೆ. ದೊಡ್ಡ ಪಕ್ಷಗಳು ಸಹೋದರ ಜಾತಿಗಳ ಮಧ್ಯೆ ಗೊಂದಲ ಸೃಷ್ಟಿಸುತ್ತಿವೆ ಎಂದು ದೂರಿದರು.
ಸಮುದಾಯದ ಮುಖಂಡ ಹನುಮಂತಪ್ಪ ದುರ್ಗ ಮಾತನಾಡಿ, ಆರ್‌ಎಸ್‌ಎಸ್‌ಗೆ ನಾಗಪುರ ಕೇಂದ್ರ ಕಚೇರಿಯಾದರೆ, ಚಿತ್ರದುರ್ಗದಲ್ಲಿ ಗುರುಪೀಠವೊಂದು ರಾಜ್ಯ ಕಚೇರಿಯಾಗಿದೆ. ಸಮುದಾಯಕ್ಕೆ ಅನ್ಯಾಯವಾದಾಗ ಪೀಠದ ಸ್ವಾಮೀಜಿ ದನಿ ಎತ್ತುತ್ತಿಲ್ಲ. ಬಿಜೆಪಿ ಓಲೈಕೆಗೆ ಮುಂದಾಗಿದ್ದಾರೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಹೆಸರು ಪ್ರಸ್ತಾಪಿಸದೆಯೇ ಹೇಳಿದರು.
ಮುಖಂಡರಾದ ದಯಾನಂದ ಮೂರ್ತಿ, ಮಹಾಲಿಂಗಪ್ಪ ಕುಂಚಿಗನಾಳ್, ಅರವಿಂದ್ ಮಂಡ್ಯ, ಪಾಪಣ್ಣ, ಎನ್.ಪ್ರಕಾಶ್ ಇತರರಿದ್ದರು.
*ಕೋಟ್*
ಬಿಜೆಪಿ ಸಚಿವರಿಗೆ, ಸಂಸದರಿಗೆ, ಶಾಸಕರಿಗೆ ಸದನಗಳಲ್ಲಿ ಈ ವಿಚಾರ ಪ್ರಸ್ತಾಪಿಸಲು ಧೈರ್ಯವಿಲ್ಲ. ಮಾದಿಗರ ಮತ ಬೇಕೆ ಹೊರತು ಧ್ವನಿ ಎತ್ತಲು ಏಕೆ ಸಾಧ್ಯವಾಗುತ್ತಿಲ್ಲ? ಪ್ರಣಾಳಿಕೆಯಲ್ಲಿ ಘೋಷಿಸಿದ ಘೋಷಣೆಗಳನ್ನು ಜಾರಿಗೆ ತರಲಾಗದಿದ್ದರೆ ಕಾನೂನು ಬಾಹಿರ ಎಂದು ಪರಿಗಣಿಸಿ ಅಂತಹ ಪಕ್ಷವನ್ನು ವಜಾ ಮಾಡಬೇಕು.
ಹರಳಯ್ಯ ಸ್ವಾಮೀಜಿ, ಐಮಂಗಲದ ಹರಳಯ್ಯ ಗುರುಪೀಠ
*ಕೋಟ್*
ವರದಿ ಜಾರಿಯಿಂದ 99 ಉಪ ಜಾತಿಗಳಿಗೆ ಅನ್ಯಾಯವಾಗಲಿದೆ ಎಂದು ಭೋವಿ ಗುರುಪೀಠದ ಸ್ವಾಮೀಜಿ ಹೇಳುತ್ತಿದ್ದಾರೆ. ಅದು ಯಾವ ರೀತಿ ಎಂಬುದನ್ನು ಬಹಿರಂಗ ಚರ್ಚೆಯ ಮೂಲಕ ಸ್ಪಷ್ಟಪಡಿಸಬೇಕು. ನಾವೆಲ್ಲರೂ ಸಹೋದರ ಸಮುದಾಯಗಳಾಗಿದ್ದು, ಜನಸಂಖ್ಯೆ ಆಧಾರದ ಮೇಲೆ ಪಾಲು ಕೇಳುತ್ತಿದ್ದೇವೆ. ಇದರಿಂದ ಯಾರಿಗೂ ಅನ್ಯಾಯವಾಗದು.
ರಾಜಣ್ಣ, ಸಮುದಾಯದ ಮುಖಂಡ