ವಿಜಯವಾಣಿ ಸುದ್ದಿಜಾಲ ಮಂಗಳೂರು
ಸದಭಿರುಚಿಯ ರಂಗಕರ್ಮಿ, ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಸದಾನಂದ ಸುವರ್ಣ (92) ವಯೋಸಹಜ ಅಸೌಖ್ಯದಿಂದ ಮಂಗಳವಾರ ನಿಧನರಾದರು.
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ 1931, ಡಿಸೆಂಬರ್ 24ರಂದು ರುಕ್ಕ ಕೋಟ್ಯಾನ್-ಪೂವಮ್ಮ ದಂಪತಿ ಪುತ್ರನಾಗಿ ಜನಿಸಿದ್ದರು. ಮೂಲ್ಕಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಮುಂಬೈಗೆ ತೆರಳಬೇಕಾಯಿತು. ತಂದೆ ಬ್ಯಾಂಕ್ ಆಫ್ ಬರೋಡದಲ್ಲಿ ನೌಕರಿ ಮಾಡುತ್ತಿದ್ದರು. ಮೊಗವೀರ ರಾತ್ರಿ ಶಾಲೆಯಲ್ಲಿ ಮುಂದಿನ ಶಿಕ್ಷಣ ಮುಗಿಸಿದ ಅವರು, ಶಾಲಾ ದಿನಗಳಲ್ಲಿಯೇ ರಂಗಭೂಮಿ ಹಾಗೂ ಸಾಹಿತ್ಯ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಈ ಅವಧಿಯಲ್ಲಿಯೇ ಗುಜರಾತಿ, ಮರಾಠಿ, ಇಂಗ್ಲಿಷ್ ರಂಗಭೂಮಿಗಳನ್ನು ಅರಿಯುವ ಪ್ರಯತ್ನ ಮಾಡಿ, ಅವುಗಳಲ್ಲಿರುವ ಹೊಸತನಗಳನ್ನು ಕನ್ನಡ ರಂಗಭೂಮಿಗೆ ಅಳವಡಿಸುವ ಪ್ರಯತ್ನ ಮಾಡಿವರು.
ಉದಯ ಕಲಾ ನಿಕೇತನ ಹವ್ಯಾಸಿ ಕಲಾ ರಂಗಭೂಮಿ ಮೂಲಕ ಮುಂಬೈಯಲ್ಲಿ 70ರ ದಶಕದಲ್ಲಿ ತಾವೇ ಬರೆದ ಹಲವು ನಾಟಕಗಳನ್ನು ಪ್ರದರ್ಶಿಸಿ ಅದರಲ್ಲಿ ಯಶಸ್ಸು ಪಡೆದರು. ಥಿಯೇಟರ್ ಟ್ರೇನಿಂಗ್ ಡಿಪ್ಲೊಮಾ ಕೋರ್ಸ್ ಸೇರಿ ಅಲ್ಲಿ ರಂಗ ತಜ್ಞರ ಜತೆಯಲ್ಲಿ ವಿಚಾರ ವಿನಿಮಯ, ವಿಮರ್ಶೆ, ರಸಸ್ವಾದ, ಜಿಜ್ಞಾಸೆ ಮೂಲಕ ಆಳವಾದ ಜ್ಞಾನ ಸಂಪಾದಿಸಿ ರಂಗಭೂಮಿಯಲ್ಲಿ ಮತ್ತಷ್ಟು ಪಕ್ವತೆ ಪಡೆದರು.
ಈಡಿಪಸ್, ಕದಡಿದ ನೀರು, ಪ್ರಜಾಪ್ರಭುತ್ವ- ಲೊಳಲೊಟ್ಟೆ, ಧರ್ಮ ಚಕ್ತ್ರ, ಸತ್ಯಂ ವದ-ಧರ್ಮಂ ಚರ, ಯಾರು ನನ್ನವರು? ಅವರು ನಿರ್ದೇಶಿಸಿದ ಇತರ ಕೆಲವು ಜನಪ್ರಿಯ ನಾಟಕಗಳು. ಇತ್ತೀಚೆಗಷ್ಟೇ ಇವರಿಗೆ ಕರ್ನಾಟಕ ಸರ್ಕಾರ ಪ್ರತಿಷ್ಠಿತ ಬಿ.ವಿ.ಕಾರಂತ ಪ್ರಶಸ್ತಿ ನೀಡಿ ಗೌರವಿಸಿತ್ತು. ಪತ್ರಕರ್ತೆ ದಿ.ಸೀತಾಲಕ್ಷ್ಮೀ ಕರ್ಕಿಕೋಡಿ ಅವರು ಸದಾನಂದ ಸುವರ್ಣರ ರಂಗ ಸಾಧನೆಯ ಕುರಿತಾಗಿ ‘ರಂಗ ಜಂಗಮ ಸದಾನಂದ ಸುವರ್ಣ’ ಎನ್ನುವ ಸಂಶೋಧನಾ ಪ್ರಬಂಧವನ್ನು ಮುಂಬೈ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಾಕ್ಟರೇಟ್ ಪಡೆದಿದ್ದರು. ನಾಟಕ ರಚನೆ, ನಟನೆ, ನಿರ್ದೇಶನದಲ್ಲಿ ಐದು ದಶಕಗಳ ಕಾಲ ಶ್ರಮಿಸಿದ ಅವರು, ಮಹಾರಾಷ್ಟ್ರ-ಕರ್ನಾಟಕ ನಡುವೆ ಸಾಂಸ್ಕೃತಿಕ ಕೊಂಡಿಯಾಗಿ ಕೆಲಸ ನಿರ್ವಹಿಸಿದವರು. ಮುಂಬೈನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಅವರು ಕೆಲ ವರ್ಷಗಳ ಹಿಂದೆ ಮಂಗಳೂರಿಗೆ ಮರಳಿ ಕೊಟ್ಟಾರ ಚೌಕಿ ಬಳಿಯ ಅಬ್ಬಕ್ಕ ನಗರದಲ್ಲಿ ನೆಲೆಸಿದ್ದರು.
ಗುಡ್ಡದ ಭೂತ
ಗುಡ್ಡದ ಭೂತ ಅವರ ನಿರ್ಮಾಣ ಹಾಗೂ ನಿರ್ದೇಶನದ ಜನಪ್ರಿಯ ದೂರದರ್ಶನ ಧಾರವಾಹಿ. ಇದು ಬಹುಭಾಷಾ ನಟ ಪ್ರಕಾಶ್ ರೈ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಶಿವರಾಮ ಕಾರಂತ, ನಾರಾಯಣಗುರು, ತುಳುನಾಡು ಒಂದು ಇಣುಕು ನೋಟ ಎಂಬ ಸಾಕ್ಷೃಚಿತ್ರಗಳನ್ನೂ ನಿರ್ದೇಶಿಸಿದ್ದರು. ಸಾಹಿತ್ಯದಲ್ಲೂ ಆಸಕ್ತಿ ಹೊಂದಿದ್ದ ಅವರು ಸಣ್ಣ ಕತೆ, ಕಾದಂಬರಿಗಳನ್ನು ಕೂಡ ಬರೆದಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕತೆ ಆಧರಿಸಿ ಅವರು ನಿರ್ದೇಶಿಸಿದ ‘ಕುಬಿ ಹಾಗೂ ಇಯಾಲ’ ಚಿತ್ರ ಫಿಲ್ಮ್‌ಫೇರ್ ಅವಾರ್ಡ್ ಸಹಿತ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಸದಾನಂದ ಸುವರ್ಣ ಅವರು ನಿರ್ಮಿಸಿದ ಮೊದಲ ಸಿನಿಮಾ ಘಟಶ್ರಾದ್ಧ. ಇದು ಗಿರೀಶ್ ಕಾಸರವಳ್ಳಿ ನಿರ್ದೇಶನದ ಮೊದಲ ಸಿನಿಮಾ. ಘಟಶ್ರಾದ್ಧ ಚಲನಚಿತ್ರ ಭಾರತದಲ್ಲಿ ಕಳೆದ ಶನಮಾನದಲ್ಲಿ ತಯಾರಾದ ಉತ್ಕೃಷ್ಟ ನೂರು ಚಲನಚಿತ್ರಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆ ಪಡೆಯಿತು. 18 ಪ್ರಶಸ್ತಿಗಳನ್ನು ಹೆಗಲಿಗೇರಿಸಿಕೊಂಡಿದ್ದ ಈ ಚಿತ್ರ, ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯಿತು.