ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರೊ. ಸದಾನಂದ ಕನವಳ್ಳಿ ಬಹುಮುಖ ವ್ಯಕ್ತಿತ್ವದ ಅನನ್ಯ ಸಾಧಕರು, ಸಂಸ್ಕೃತಿಯ ಪರಿಚಾರಕರೂ ಆಗಿದ್ದರು ಎಂದು ಬೆಳಗಾವಿ ಲಿಂಗರಾಜ ಕಾಲೇಜಿನ ಪ್ರಾಚಾರ್ಯ ಡಾ. ಹನುಮಂತ ಮೇಲಿನಮನಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಸದಾನಂದ ಕನವಳ್ಳಿ ಸ್ಮರಣಾರ್ಥ ಶನಿವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ. ಸದಾನಂದ ಕನವಳ್ಳಿಯವರ ಬಹುಮುಖ ವ್ಯಕ್ತಿತ್ವ ಕುರಿತು ಮಾತನಾಡಿದರು.
ಕನವಳ್ಳಿ ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿ ಕ್ರಿಯಾಶೀಲ ಸಂಘಟಕರಾಗಿದ್ದು, ಕ್ರೀಡೆಗಳ ಬಗ್ಗೆ ಅತೀವ ಆಸಕ್ತಿ ಹೊಂದಿದ್ದರು. ಅವರು ಮರೆತು ಹೋದ ವಿಜಯನಗರ ಎಂಬ ಅನುವಾದಿತ ಕೃತಿಯನ್ನು ಮನಮುಟ್ಟುವಂತೆ ಬರೆದಿದ್ದಾರೆ. ತಮಗಿಂತ ಕಿರಿಯರನ್ನು ಗೌರವದಿಂದ ಕಾಣುತ್ತಿದ್ದರು. ಪರಿಸರ ಸ್ನೇಹಿಯಾಗಿ ಬಾಳಿದ ಅವರು ಅತಿಥಿ ಸತ್ಕಾರಕ್ಕೆ ಹೆಸರಾಗಿದ್ದರು. ಅವರ ಜೀವನ ಯಶೋಗಾಥೆ ನಮಗೆಲ್ಲಾ ಪ್ರೇರಣೆ ಎಂದರು.
ಡಾ. ವೀರಣ್ಣ ರಾಜೂರ ಮಾತನಾಡಿ, ಸದಾನಂದ ಕನವಳ್ಳಿಯವರದು ಸಮಗ್ರ ವ್ಯಕ್ತಿತ್ವ. ಅವರಲ್ಲಿದ್ದ ಇಚ್ಚಾಶಕ್ತಿ ಅಗಾಧವಾದದ್ದು. ಪ್ರಾಮಾಣಿಕತೆ, ಬದ್ಧತೆಗೆ, ಕರ್ತವ್ಯನಿಷ್ಠತೆಗೆ ಹೆಸರಾಗಿದ್ದರು. ಅವರ ಸಮಗ್ರ ಸಾಹಿತ್ಯ ಸಂಪುಟ ಪ್ರಕಟವಾಗಬೇಕು. ಅವರ ಹೆಸರಿನ ಟ್ರಸ್ಟ್ ಪ್ರಾರಂಭಿಸಿ ಕ್ರಿಯಾಶೀಲವಾದ ರಚನಾತ್ಮಕ ಕಾರ್ಯ ಮುಂದುವರಿಸಬೇಕು ಎಂದರು.
ವಿರೇಶ ಕನವಳ್ಳಿ, ಡಾ. ಶೈಲಜಾ ಅಮರಶೆಟ್ಟಿ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಡಾ. ಶಿವಾನಂದ ಶೆಟ್ಟರ್, ಇತರರು ಇದ್ದರು.
ಗುರು ಹಿರೇಮಠ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.