ಜಿಲ್ಲೆ

ಸಾಧು ಸಂತರದು ತ್ಯಾಗಮಯ ಬದುಕು

ನರೇಗಲ್ಲ: ಈ ದೇಶದಲ್ಲಿ ಜನಿಸಿದ ಯಾವುದೇ ಸಾಧು ಸಂತರು ಎಂದಿಗೂ ಸ್ವಾರ್ಥದ ಬದುಕು ಸಾಗಿಸಲಿಲ್ಲ. ಅವರದು ಯಾವಾಗಲೂ ತ್ಯಾಗಮಯ ಬದುಕು. ಅವರು ಈ ದೇಶದ ಉದ್ಧಾರಕ್ಕಾಗಿಯೆ ಬದುಕಿದರೆ ಹೊರತು ಎಂದಿಗೂ ತಮಗಾಗಿ, ತಮ್ಮ ಉದ್ಧಾರಕ್ಕಾಗಿ ಅಲ್ಲ. ಅಂತಹ ಮಹಾಮಹಿಮರಲ್ಲಿ ಕೋಡಿಕೊಪ್ಪದ ಶ್ರೀವೀರಪ್ಪಜ್ಜನವರೂ ಒಬ್ಬರು ಎಂಬುದನ್ನು ಕೇಳಿ ತಿಳಿದು ಬಹಳಷ್ಟು ಆನಂದವಾಗಿದೆ ಎಂದು ಆರ್‌ಎಸ್‌ಎಸ್‌ನ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸತೀಶ ಕುಮಾರ ಹೇಳಿದರು.

ಕೋಡಿಕೊಪ್ಪದ ಶ್ರೀ ವೀರಪ್ಪಜ್ಜನವರ ಜಾತ್ರಾ ಮಹೋತ್ಸವದ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಪುರಾಣ ಪ್ರವಚನದಲ್ಲಿ ಅವರು ಮಾತನಾಡಿದರು. ‘ಭಾರತದಲ್ಲಿನ ಕುಟುಂಬ ಪದ್ಧತಿ ಜಗತ್ತಿನ ಬಹುತೇಕರಿಗೆ ಪ್ರಿಯವಾಗಿದೆ. ನಮ್ಮ ಪರಂಪರೆಯನ್ನು ನಾವಷ್ಟೇ ಅನುಭವಿಸದೆ ಅದನ್ನು ಇತರರೊಂದಿಗೆ ಹಂಚಿಕೊಂಡು ಎಲ್ಲರೂ ಸುಖವಾಗಿರಲಿ ಎಂಬ ಆಶಯವನ್ನು ತೋರಿಸಿದವರು ಭಾರತೀಯರು. ಹೀಗಾಗಿ ಭಾರತ ಎಂದಿಗೂ ತನ್ನ ಸ್ವಂತ ಸುಖವನ್ನು ಬಯಸಿದ ದೇಶವಾಗಿಲ್ಲ. ಭಾರತ ದೇಶದಲ್ಲಿನ ಜ್ಞಾನ, ವಿಜ್ಞಾನ, ನಾಗರಿಕತೆ ಎಂದಿಗೂ ಭವ್ಯವಾದದ್ದು. ಇದನ್ನು ಅನುಸರಿಸಲು ಸಾಧ್ಯವಾಗದೆ ನಾವು ಇದೀಗ ಪಾಶ್ಚಾತ್ಯ ಸಂಸ್ಕೃತಿಯತ್ತ ಮುಖ ಮಾಡಿದ್ದೇವೆ. ಇದರಿಂದ ನಾವು ನಮ್ಮತನವನ್ನು ಕಳೆದುಕೊಂಡು ಇತರರಿಗೆ ದಾಸ್ಯರಾಗುವ ಹಂತಕ್ಕೆ ಬಂದಿದ್ದೇವೆ. ಇದು ಅತ್ಯಂತ ವಿಷಾಧನೀಯ ಎಂದರು.

ನಮ್ಮ ದೇಶದ ದುರ್ದೈವ ಏನೆಂದರೆ ಬಹುತೇಕರು ನಮ್ಮ ರಾಷ್ಟ್ರದ ಬಗ್ಗೆಯೇ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಆದರೆ, ಒಬ್ಬ ವಿವೇಕಾನಂದ ಭಾರತ ಎಂದರೇನು? ಭಾರತದ ಶ್ರೇಷ್ಠತೆ ಏನು? ಭಾರತದ ಜ್ಞಾನ ವಿಜ್ಞಾನ ಅದೆಷ್ಟು ಎತ್ತರದ ಮಟ್ಟದಲ್ಲಿದೆ ಎಂಬುದನ್ನು ಜಗತ್ತಿಗೆ ತೋರಿಸಿ, ನಮ್ಮನ್ನು ಶ್ರೇಷ್ಠರನ್ನಾಗಿ ಮಾಡುವುದರ ಜತೆಗೆ ಭಾರತ ಜಗತ್ತಿನ ವಿಶ್ವ ಗುರು ಎಂಬುದನ್ನು ಸಾರಿ ಹೇಳಿದರು. ಇಂತಹ ಮಹಾಮಹಿಮರು ಕಾಲಕಾಲಕ್ಕೆ ಭರತ ಭೂಮಿಯಲ್ಲಿ ಜನಿಸಿರುವುದರಿಂದಲೆ ಯಾರು ಏನೇ ಮಾಡಿದರೂ ಭಾರತವನ್ನು ಬಗ್ಗಿಸುವುದಕ್ಕೆ ಸಾಧ್ಯವಾಗಿಲ್ಲ. ಈಗಲಾದರೂ ನಾವು ನಮ್ಮ ಮಕ್ಕಳಿಗೆ ಭವ್ಯ ಭಾರತದ ಕಥೆಯನ್ನು, ಇತಿಹಾಸವನ್ನು ತಿಳಿಸಿಕೊಡಬೇಕಾದ ಕಾಲ ಸನ್ನಿಹಿತವಾಗಿದೆ. ಈಗಲೂ ನಾವು ಸುಮ್ಮನಿದ್ದರೆ ನಮ್ಮ ದೇಶಕ್ಕೆ ನಾವೇ ದ್ರೋಹ ಬಗೆದಂತಾಗುತ್ತದೆ ಎಂದರು.

ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಎಂ.ಸಿ. ಚಪ್ಪನ್ನಮಠ, ನಿವೃತ್ತ ಶಿಕ್ಷಕ ಎಂ.ಎ. ಹಿರೆವಡೆಯರ, ಪ್ರವಚನಕಾರ ಡಾ. ವಿಶ್ವನಾಥ ಸ್ವಾಮೀಜಿ, ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯರು, ಅಳವಂಡಿ ಸಿದ್ಧೇಶ್ವರ ಸಂಸ್ಥಾನಮಠದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಇದ್ದರು.