ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ತಪಸಿಹಳ್ಳಿ ಪುಷ್ಪಾಂಡಜ ಮಹರ್ಷಿ ಆಶ್ರಮಕ್ಕೆ ಶೈಕ್ಷಣಿಕ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ 10 ಎಕರೆ ಭೂಮಿ ಮಂಜೂರು ಮಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಭರವಸೆ ನೀಡಿದರು.
ನಗರದ ತಪಸೀಹಳ್ಳಿ ಪುಷ್ಪಾಂಡಜ ಮಹರ್ಷಿ ಆಶ್ರಮದಲ್ಲಿ ಅಖಿಲ ಭಾರತ ತೊಗಟ ವೀರ ಕ್ಷತ್ರಿಯ ಮಹಾಸಭಾ, ಶ್ರೀ ಪುಷ್ಪಾಂಡಜ ಮಹರ್ಷಿ ಗುರುಪೀಠ ಟ್ರಸ್ಟ್, ಕರ್ನಾಟಕ ತೊಗಟವೀರ ಕ್ಷತ್ರಿಯ ಸಂಘಗಳ ಮಹಾಮಂಡಳಿ ಹಾಗೂ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕ ತೊಗಟವೀರ ಕ್ಷತ್ರಿಯ ಸಂಘಗಳಿಂದ ಭಾನುವಾರ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜದಲ್ಲಿ 50 ಲಕ್ಷಕ್ಕೂ ಹೆಚ್ಚು ನೇಕಾರಿಕಾ ಸಮುದಾಯ ಇದೆ. ಅನೇಕ ಒಳ ಪಂಗಡಗಳು ಅಭಿವೃದ್ಧಿಗಾಗಿ ಒಂದಾಗಬೇಕಿದೆ. ನನ್ನ ರಾಜಕೀಯ ಬೆಳವಣಿಗೆಗೆ ಕೈ ಜೋಡಿಸಿರುವ ನಮ್ಮ ಸಮುದಾಯ ರಾಜ್ಯದಲ್ಲಿ ಎಲ್ಲೆ ಚೌಡೇಶ್ವರಿ ದೇವಾಲಯ ಹಾಗೂ ಮಠ ನಿರ್ಮಾಣಕ್ಕೆ ನನ್ನ ಸಹಕಾರ ಇರುತ್ತದೆ ಎಂದರು.
ಕಾಲೇಜು ನಿರ್ಮಾಣಕ್ಕೆ ಭೂಮಿ: ಆಶ್ರಮಕ್ಕೆ ಸಿಮೆಂಟ್ ರಸ್ತೆ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ಧನ ಸಹಾಯ ನೀಡುವುದಾಗಿ ಭರವಸೆ ನೀಡಿದ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂ.ಟಿ.ಬಿ ನಾಗರಾಜ್, ಆಶ್ರದಿಂದ ಕಾಲೇಜು ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದರು.
ತೊಗಟವೀರ ಕ್ಷತ್ರಿಯ ಸಂಘ ಮತ್ತು ನೇಕಾರ ಮಹಾಸಭಾದ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ಮಾತನಾಡಿ, ತೊಗಟವೀರ ಸಂಘಕ್ಕೆ 75 ವರ್ಷ ತುಂಬುತ್ತಿದೆ. ಇದರ ಅಂಗವಾಗಿ ನವೆಂಬರ್‌ನಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.
ಪುಷ್ಪಾಂಡಜ ಆಶ್ರಮದ ಪೀಠಾಧ್ಯಕ್ಷ ಶ್ರೀ ದಿವ್ಯಜ್ಞಾನಾನಂದ ಸ್ವಾಮೀಜಿ ಮಾತನಾಡಿ, ಸಮುದಾಯದ ಅಭಿವೃದ್ಧಿಗಾಗಿ ಗುಗುಪೀಠ ಸ್ಥಾಪನೆ ಅರ್ಥಪೂರ್ಣವಾಗಿದ್ದು, ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮನೋಭಾವ ಯುವ ಪೀಳಿಗೆಗೆ ಬರಲಿ ಎಂಬುದು ಗುರುಪೀಠದ ಆಶಯವಾಗಿದೆ ಎಂದರು.
ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದೊಂದಿಗೆ ಆರ್ಥಿಕ ಸಹಾಯ ನೀಡಲಾಯಿತು.
ತೊಗಟ ವೀರ ಯುವ ವೇದಿಕೆ ಅಧ್ಯಕ್ಷ ಶ್ರೀಧರ್ ಗಜಪಡೆ, ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ದೇವನಹಳ್ಳಿ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ, ಆಂಧ್ರಪ್ರದೇಶದ ಧರ್ಮಾವಂ ಶಾಸಕ ಕೇತಿರೆಡ್ಡಿ, ಶಾಸಕ ಟಿ.ವೆಂಕಟರಮಣಯ್ಯ, ಬಮುಲ್ ಮಾಜಿ ಅಧ್ಯಕ್ಷ ಎಚ್.ಅಪ್ಪಯ್ಯಣ್ಣ, ನೇಕಾರ ತೊಗಟವೀರ ಕ್ಷತ್ರಿಯ ಯುವ ವೇದಿಕೆ ಅಧ್ಯಕ್ಷ ಡಿ.ಎನ್.ಮಂಜುನಾಥ್ ಇತರರು ಇದ್ದರು.